ಬೆಂಗಳೂರು: ಶೃಂಗೇರಿಯಿಂದ ಕಾಶ್ಮೀರಕ್ಕೆ ಶಾರದಾಂಬೆ ಮೂರ್ತಿಯ ರಥಯಾತ್ರೆಯು ಪ್ರಾರಂಭವಾಗಿದ್ದು, ಮಾರ್ಚ್ 22 ರಂದು ಕಾಶ್ಮೀರದ ಟೀಟ್ವಾಲ್‌ನಲ್ಲಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ ಎಂದು ಸೇವ್ ಶಾರದಾ ಕಮಿಟಿಯ ಅಧ್ಯಕ್ಷ ರವೀಂದ್ರ ಪಂಡಿತ್ ಅವರು ಹೇಳಿದ್ದಾರೆ. ಶುಕ್ರವಾರ ಜಯನಗರದ ಕಾಶ್ಮೀರ ಭವನದಲ್ಲಿ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ, ಹೋಮ-ಕೈಂಕರ್ಯಗಳನ್ನು ನಡೆಸಿ ಮಾತನಾಡಿದ ರವೀಂದ್ರ ಪಂಡಿತ್, ಕಾಶ್ಮೀರ ಭಾರತೀಯ ಪರಂಪರೆಯ ಪ್ರತಿನಿಧಿಯೆಂದರೆ ತಪ್ಪಾಗಲಾರದು. ಕಾಶ್ಮೀರದಲ್ಲಿ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ದೇವಾಲಯಗಳಿವೆ.
ಪಂಚಲೋಹದಲ್ಲಿ ಶಾರದಾಂಬೆ ವಿಗ್ರಹ ನಿರ್ಮಾಣ: ಇವುಗಳಲ್ಲಿ ಶಾರದಾಪೀಠ ದೇವಾಲಯವು ಒಂದಾಗಿದ್ದು, ಹಿಂದೆ ದೇಶ ವಿದೇಶಗಳಿ೦ದಲೂ ವಿದ್ಯಾಭ್ಯಾಸವನ್ನು ಪಡೆಯಲು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಇಂದಿಗೂ ಶಾರದಾ ಗ್ರಾಮವೆಂದು ಪ್ರಚಲಿತದಲ್ಲಿರುವ ಟೀಟ್ವಾಲ್‌ನಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಶಾರದಾಂಬೆಯ ವಿಗ್ರಹವು ಪಂಚಲೋಹದಲ್ಲಿ ನಿರ್ಮಿತವಾಗಿದ್ದು, 100 ಕೆ. ಜಿ ತೂಕವಿದೆ. ಶೃಂಗೇರಿಯಲ್ಲಿ ಸ್ಥಾಪಿಸಿರುವ ಶಾರದಾಂಬೆಯ ವಿಗ್ರಹವನ್ನು ಈ ವಿಗ್ರಹ ಹೋಲುತ್ತದೆ. ಇದನ್ನು ಬೆಂಗಳೂರಿನ ಶಿಲ್ಪಿಗಳು ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಟೀಟ್ವಾಲ್‌ನ ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿದ್ದು, ಕಿಶನ್ ಗಂಗಾನದಿಯ ದಡದಲ್ಲಿದೆ. ಶ್ರೀನಗರದಿಂದ 170 ಕಿ. ಮೀ ದೂರದಲ್ಲಿದೆ. ರಸ್ತೆಯ ಮೂಲಕ 6 ಗಂಟೆ ಪ್ರಯಾಣ ನಡೆಸಿ ಸಾಧನಾ ಪಾಸ್ ಮೂಲಕ ಕುಪಾರ ಜಿಲ್ಲೆಯ ತಂಗ್‌ಧಾರ್‌ಗೆ ಪ್ರಯಾಣಿಸಬಹುದು. ಟೀಟ್ಬಾಲ್ ತಂಗ್‌ಧಾರ್‌ನಿಂದ ಸುಮಾರು 30 ನಿಮಿಷದ ವಾಹನದ ಪ್ರಯಾಣವಾಗಿದೆ. ಅಲ್ಲಿನ ಹವಾಮಾನವು ಕಾಶ್ಮೀರ ಕಣಿವೆಯ ಉಳಿದ ಭಾಗಗಳಂತೆ ಇದೆ. ಭೂಲಕ್ಷಣಗಳ ದೃಷ್ಟಿಯಿಂದ ಟೀಟ್ವಾಲ್ ಜಮ್ಮು ಪ್ರದೇಶವನ್ನು ಸ್ವಲ್ಪ ಹೋಲುತ್ತದೆ. ಮುಖ್ಯವಾಗಿ ಈಗ ನಿರ್ಮಾಣವಾಗುತ್ತಿರುವ ದೇವಾಲಯವು ನಿಯಂತ್ರಣ ರೇಖೆಯ ಬಳಿಯಲ್ಲಿರಲಿದೆ ಎಂದು ಹೇಳಿದರು.
ಶಾರದಾ ಸರ್ವಜ್ಞಪೀಠ 25 ಕಿ. ಮೀ ದೂರ : ಟೀಟ್ಬಾಲ್ನಿಂದ ಮೂಲ ಶಾರದಾ ಸರ್ವಜ್ಞಪೀಠ 25 ಕಿ. ಮೀ ದೂರದಲ್ಲಿದೆ. ಸದ್ಯ ನಿರ್ಮಾಣ ಮಾಡುತ್ತಿರುವ ದೇವಾಲಯದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು ಇನ್ನೊಂದು ಬದಿಯಲ್ಲಿ ಅಪ್ರೋಚ್ ರಸ್ತೆ ನಿರ್ಮಿಸಲು ಕಂದಾಯ ಇಲಾಖೆಗೆ ಕೇಳಿಕೊಂಡಿದ್ದೇವೆ ಎಂದರು.
ಜನವರಿ 24 ರಂದೇ ಶೃಂಗೇರಿಯಿಂದ ಯಾತ್ರೆ ಆರಂಭ: ಟೀಟ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾಂಬೆಯ ದೇವಾಲಯಕ್ಕೆ ದೇವಿಯ ಮೂರ್ತಿ ರಥ ಯಾತ್ರೆಯ ಮೂಲಕ ಬರಲಿದೆ. ಈ ರಥಯಾತ್ರೆಯು ಜನವರಿ 24 ರಂದೇ ಶೃಂಗೇರಿಯಿಂದ ಆರಂಭವಾಗಿದೆ ಎಂದು ಕರ್ನಾಟಕ ಕಾಶ್ಮೀರ ಹಿಂದೂ ಸಮಾಜದ ಅಧ್ಯಕ್ಷ ಆರ್. ಕೆ. ಮಟ್ಟು ತಿಳಿಸಿದರು.