ಬೆಂಗಳೂರು:ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಘೋಷವಾಕ್ಯವನ್ನು ನೀಡುವ ಮೂಲಕ ಜಾತ್ಯತೀಯ ವಿಚಾರವನ್ನು ಪ್ರಚುರಪಡಿಸಿದ್ದ ಕನ್ನಡದ ಆದಿಕವಿ, ಮಹಾಕವಿ ಪಂಪನ ಪುತ್ಥಳಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದ ಆವರಣದ ಗೋಡೆಗೆ ತಗುಲಿಕೊಂಡಂತೆ ಪಂಪ ಮಹಾಕವಿ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಲು ಹಾಗೂ ರಸ್ತೆಯನ್ನು ವಿಶೇಷ ರಸ್ತೆ ಎಂದು ಪರಿಗಣಿಸಿ ಪ್ರೇಕ್ಷಣೀಯ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅನುಮತಿ ಕೇಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಚೇರಿಯ ಮುಂಭಾಗದಲ್ಲಿರುವ ಪಂಪ ಮಹಾಕವಿ ರಸ್ತೆಯಲ್ಲಿ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಪಂಪ ಮಹಾಕವಿ ರಸ್ತೆಯನ್ನು ಕನ್ನಡ ಇತಿಹಾಸ ಸಾರುವ ರಸ್ತೆಯನ್ನಾಗಿಸಿ ಮೇಲು ದರ್ಜೆಗೆ ಏರಿಸಬೇಕೆಂದು ಪರಿಷತ್ತಿನ ಉದ್ದೇಶವಾಗಿದೆ. ಸಮಗ್ರ ಕನ್ನಡಿಗರ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಹಾಗೂ ಎಲ್ಲ ಸಂಘ-ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿನ ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ನ್ಯಾಷನಲ್ ಕಾಲೇಜು ರಸ್ತೆ ತುದಿಯವರೆಗೆ ಇರುವ ಪಂಪ ಮಹಾಕವಿ ರಸ್ತೆಯನ್ನು ಆಕರ್ಷಣೀಯವಾಗಿ ಆಧುನಿಕರಣಗೊಳಿಸಿ ಕನ್ನಡಮಯ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕೆಂಬುದು ಪರಿಷತ್ತಿನ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್ ಅವರ ಬಳಿಯೂ ಚರ್ಚಿಸಲಾಗಿದೆ. ಈ ರಸ್ತೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸೌಂದರ್ಯೀಕರಣಗೊಳಿಸಿ, ಕನ್ನಡ ಗೀತೆಗಳು, ಕನ್ನಡದ ಸಂಗೀತವನ್ನು ಬಿತ್ತರಿಸುವ ವ್ಯವಸ್ಥೆ ಮಾಡುವುದರ ಜೊತೆಗೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಡಬೇಕೆಂದು ಕೋರಿ ಪತ್ರ ಬರೆಯಲಾಗಿದೆ.
ಇದನ್ನೂ ಓದಿ:ಕಸಾಪದಲ್ಲಿ ನಾಡು ನುಡಿಗೆ ಮಹತ್ವವೇ ಹೊರತು ರಾಜಕೀಯಕ್ಕಲ್ಲ: ಡಾ.ಮಹೇಶ್ ಜೋಶಿ