ಬೆಂಗಳೂರು: ಆಂಬ್ಯುಲೆನ್ಸ್‌ಗಳ ತಡೆ ರಹಿತವಾಗಿ ಸಂಚಾರಕ್ಕೆ ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಈವರೆಗೂ ಒಟ್ಟು 3,368 ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ರಾಜ್ಯದಲ್ಲಿರುವ ಎಲ್ಲ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು.
ಆಂಬ್ಯುಲೆನ್ಸ್‌ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಂಬ್ಯುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ನ.8ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರಿ ವಕೀಲರಾದ ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ವಿವರಿಸಿದರು.
ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆಂಬ್ಯುಲೆನ್ಸ್‌ಗಳಿವೆ. ಅವುಗಳನ್ನು ಸರ್ಕಾರ ತಪಾಸಣೆ ನಡೆಸಿದಾಗ 3,368ಗಳಿಗೆ ಮಾತ್ರ ಜಿಪಿಎಸ್ ಅಳವಡಿಸಿರುವುದು ಕಂಡುಬದಿದೆ. ಉಳಿದ ಆಂಬ್ಯುಲೆನ್ಸ್‌ಗಳಿಗೂ ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಸಂಚರಿಸುವ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲ ಆಂಬ್ಯುಲೆನ್ಸ್‌ಗಳ ಚಾಲಕರಿಗೆ ಮಾಹಿತಿ ನೀಡಲಾಗಿದೆ.