ಬೆಂಗಳೂರು:ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಯುವತಿಯನ್ನು ಪ್ರೀತಿಯ ಬಲೆ ಬೀಳಿಸಿ, ಮದುವೆಯಾಗುವುದಾಗಿಯೂ ನಂಬಿಸಿ 2 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಪಾಂಡಿಚೇರಿ ಮೂಲದ ಕಾರ್ತಿಕ್ ವಂಚನೆ ಮಾಡಿರುವ ವ್ಯಕ್ತಿ, ಈತ ನಗರದ ಎ. ನಾರಾಯಣಪುರ ನಿವಾಸಿಯಾಗಿರುವ ಯುವತಿಗೆ 2017ರಲ್ಲಿ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಪರಿಚಯ ಫೋನ್ ನಂಬರ್ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ. ಬಳಿಕ ನಿತ್ಯ ವ್ಯಾಟ್ಸ್ಆ್ಯಪ್ನಲ್ಲಿ ಕುಶಲೋಪರಿ ವಿಚಾರಿಸುತ್ತಿದ್ದ. 2018ರಲ್ಲಿ ಶಾಪಿಂಗ್ ಮಾಲ್‌ವೊಂದರಲ್ಲಿ ಇಬ್ಬರು ನೇರವಾಗಿ ಭೇಟಿಯಾಗಿದ್ದರು. ತಾನು ಯೂನಿಟ್ ಇನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿ ಕಚೇರಿಯಿದೆ ಎಂದು ಯುವತಿಗೆ ಪ್ರೇಮ ನಿವೇದನೆ ಮಾಡಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಇದಕ್ಕೆ ಯುವತಿ ಒಪ್ಪಿಗೆ ಸೂಚಿಸಿದ್ದಳು. ಇದಾದ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ತಿಕ್ ಬೆಂಗಳೂರಿಗೆ ಬಂದು ಭೇಟಿಯಾಗಿ ಹೋಗುತ್ತಿದ್ದ. ಮೈಸೂರು ಪ್ರವಾಸಕ್ಕೆ ಕೂಡಾ ಕರೆದೊಯ್ದಿದ್ದ.