ಬೆಂಗಳೂರು: ಅಮಾನತುಗೊಂಡಿದ್ದ ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ ಸಂಬಂಧ ಇಬ್ಬರು ಸಚಿವರು ಸೇರಿ ಆರು ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಂದೀಶ್ ಸಾವಿಗೆ ಪರೋಕ್ಷವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಿಸಿಬಿ ಎಸಿಪಿ ರೀನಾ ಸುವರ್ಣ, ಬೈರತಿ ಬಸವರಾಜ್ ಸಂಬಂಧಿಯಾದ ಚಂದ್ರು ಹಾಗೂ ಗಣೇಶ್ ಕಾರಣ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಿದ್ದಾರೆ.
ಬೈರತಿ ಬಸವರಾಜ್ ಅವರ ಸಂಬಂಧಿಗಳ ಕಿರುಕುಳವೇ ನಂದೀಶ್ ಹೃದಯಾಘಾತಕ್ಕೆ ಕಾರಣ. ಚಂದ್ರು ಹಾಗೂ ಗಣೇಶ್ ಹೇಳಿದ ಮಾತು ಕೇಳದಿದ್ದಕ್ಕೆ ಟಾರ್ಗೆಟ್ ಮಾಡಲಾಗಿದೆ. ಉದ್ದೇಶ ಪೂರ್ವಕವಾಗಿ ಸಿಸಿಬಿಗೆ ಮಾಹಿತಿ ನೀಡಿ ದಾಳಿ ಮಾಡಿಸಲಾಗಿದೆ. ಅಲ್ಲದೇ ಅಮಾನತು ಮಾಡುವಂತೆ ಒತ್ತಡ ಹಾಕಲಾಗಿದೆ. ಜತೆಗೆ ಪೋಸ್ಟಿಂಗ್ಗಾಗಿ ಬೈರತಿ ಬಸವರಾಜ್ ಅವರಿಗೆ 50 ಲಕ್ಷ ರೂ.ಹಾಗೂ ಗೃಹ ಸಚಿವರಿಗೆ 20 ಲಕ್ಷ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ಪೊಲೀಸರಿಗೆ ದೂರ ನೀಡಿದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಸಸ್ಪೆಂಡ್ ಮಾಡುವ ಮೊದಲು ನಂದೀಶ್ ಕಡೆಯಿಂದ ಮಾಹಿತಿ ಕೇಳಿಲ್ಲ. ಹೀಗಾಗಿ ಎಲ್ಲರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರು ನೀಡಲಾಗಿದೆ. ಎಫ್ಐಆರ್ ದಾಖಲಿಸದಿದ್ದಲ್ಲಿ ಕೋರ್ಟ್ಗೆ ಹೋಗುವುದಾಗಿ ಅಬ್ರಾಹಂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಇನ್ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ: ನನ್ನನ್ನು ಸೇರಿಸಿ ತನಿಖೆ ನಡೆಸಲಿ ಎಂದ ಸಚಿವ ಎಂಟಿಬಿ ನಾಗರಾಜ್