ಕರ್ನಾಟಕ

karnataka

ETV Bharat / state

ತೋಟಗಾರಿಕಾ ಇಲಾಖೆ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ - ಸಪ್ನಾ ಮಲ್ಲನಗೌಡ ಪಾಟೀಲ್

ಲಾಲ್​​ಬಾಗ್​ನಲ್ಲಿರುವ ತೋಟಗಾರಿಕಾ ಇಲಾಖೆ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಾಲ್​​ಬಾಗ್​ನಲ್ಲಿರುವ ತೋಟಗಾರಿಕಾ ಇಲಾಖೆ
ಲಾಲ್​​ಬಾಗ್​ನಲ್ಲಿರುವ ತೋಟಗಾರಿಕಾ ಇಲಾಖೆ

By

Published : Feb 24, 2023, 4:55 PM IST

ಬೆಂಗಳೂರು : ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಿಢೀರ್ ದಾಳಿ‌ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಸಪ್ನಾ ಮಲ್ಲನಗೌಡ ಪಾಟೀಲ್ ಎಂಬುವವರು ನೀಡಿದ ದೂರಿನನ್ವಯ ಇಲಾಖೆಯ ನಿರ್ದೇಶಕರ ಕಚೇರಿ, ಜಂಟಿ ನಿರ್ದೇಶಕರ ಕಚೇರಿ, ಎಂ.ಎಸ್.ಬಿಲ್ಡಿಂಗ್​ನಲ್ಲಿರುವ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ತನಿಖಾಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ.

ಆರೋಪವೇನು?: ದೂರುದಾರರು ವಿಜಯಪುರದಲ್ಲಿ ಪಂಚಮ ಎಂಟರ್​ಪ್ರೈಸಸ್​ ಎಂಬ ಹೆಸರಿನ ತೋಟಗಾರಿಕಾ ಕಂಪನಿ ತೆರೆದಿದ್ದು, ನೋಂದಣಿಗಾಗಿ ತೋಟಗಾರಿಕಾ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನೊಂದಣಿ ನಂತರ ಕಂಪನಿಯಿಂದ ಸಬ್ಸಿಡಿ ಮೂಲಕ ರೈತರಿಗೆ ಯಂತ್ರೋಪಕರಣ, ಹನಿ ನೀರಾವರಿ ಪರಿಕರಗಳ ಪೂರೈಕೆ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿತ್ತು.

ಸಾಕಷ್ಟು ಬಾರಿ ಓಡಾಡಿದರೂ ಕಂಪನಿಯನ್ನು ನೋಂದಣಿ ಮಾಡಿಕೊಡದೇ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಡಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ರಾಜ್ಯದ ಕಂಪನಿಗಳಿಗೆ ನೋಂದಣಿ ಮಾಡಿಕೊಡದೇ ಅನ್ಯರಾಜ್ಯದ ಕಂಪನಿಗಳಿಗೆ ನೋಂದಣಿ ಮಾಡಿಕೊಡಲಾಗುತ್ತಿದೆ ಎಂದು ಸಪ್ನಾ ಮಲ್ಲನಗೌಡ ಪಾಟೀಲ್ ದೂರಿದ್ದರು.

ಬೆಸ್ಕಾಂ ಎಂಜಿನಿಯರ್ ಬಲೆಗೆ: ಕಾಮಗಾರಿ ಮಂಜೂರಾತಿ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ಹರಿಹರ ಬೆಸ್ಕಾಂ ಎಂಜಿನಿಯರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ. ಜಿಲ್ಲೆಯ ಹರಿಹರ ತಾಲೂಕು ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರಿಬಸಯ್ಯ ಲೋಕಾಯುಕ್ತರ ಆರೋಪಿ ಎಂದು ತಿಳಿದುಬಂದಿದೆ.

ಹರಿಹರದ ತುಂಗಭದ್ರಾ ನದಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಒಂದು ಫೈಲ್​ಗೆ ಐದು ಸಾವಿರ ಎಂದು 15 ಸಾವಿರ ರೂ ಕರಿಬಸಯ್ಯ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಈಗಾಗಲೇ ಒಂಬತ್ತು ಸಾವಿರ ರೂಪಾಯಿ ಪಡೆದಿದ್ದ ಇಂಜಿನಿಯರ್ ಕರಿಬಸಯ್ಯ, ಇನ್ನುಳಿದ ಆರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ದಿಢೀರ್ ದಾಳಿ: ಕೆಇಬಿ ಗುತ್ತಿಗೆದಾರ ಬೇವಿನಹಳ್ಳಿ ಮಹೇಶ್ವರಪ್ಪ ಅವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿ, ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಆಂಜನೇಯ ತಂಡ ದಾಳಿ ಮಾಡಿತ್ತು. ಎಂಜನಿಯರ್ ಕರಿಬಸಯ್ಯರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :ಲೋಕಾ ದಾಳಿ.. ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದ ಹರಿಹರ ಬೆಸ್ಕಾಂ ಎಂಜನಿಯರ್

ABOUT THE AUTHOR

...view details