ಬೆಂಗಳೂರು: ಅಪಘಾತವಾಗಿರುವ ವಾಹನಗಳನ್ನು ಇನ್ನು ಮುಂದೆ ಸಂಚಾರಿ ಪೊಲೀಸ್ ಠಾಣೆಗಳ ಮುಂದೆ ತಿಂಗಳುಗಟ್ಟಲೆ ಇರಿಸಿಕೊಳ್ಳುವಂತಿಲ್ಲ. ತಪಾಸಣೆಯ ನೆಪದಲ್ಲಿ ಠಾಣೆಗಳ ಮುಂದೆ ವಾಹನ ಇರಿಸಿಕೊಳ್ಳುವುದು ಸರಿಯಲ್ಲ. ಆ್ಯಕ್ಸಿಡೆಂಟ್ ಆದ ವಾಹನಗಳನ್ನು 24 ಗಂಟೆಯೊಳಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಮಾಲೀಕರಿಗೆ ಹಿಂತಿರುಗಿಸಲಾಗುವುದು ಎಂದು ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.
ಅಪಘಾತ ಪ್ರಕರಣಗಳಲ್ಲಿ ವಾಹನಗಳನ್ನು ವಶಪಡಿಸಿಕೊಂಡು ಠಾಣೆಗಳ ಮುಂದೆ ನಿಲ್ಲಿಸಲಾಗುತ್ತಿದೆ. ಹೀಗೆ ಠಾಣೆಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಇದರಿಂದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಆ್ಯಕ್ಸಿಡೆಂಟ್ ಆಗಿರುವ ಅಥವಾ ಅಪಘಾತ ಮಾಡಿರುವ ವಾಹನಗಳನ್ನು ಆರ್ಟಿಒ ಅಧಿಕಾರಿಗಳಿಂದ ತ್ವರಿತವಾಗಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂಎ ಸಲೀಂ ತಾಂತ್ರಿಕವಾಗಿ ವಾಹನಗಳಲ್ಲಿ ದೋಷವಿದೆಯೇ ಎಂಬುದನ್ನು ಪತ್ತೆ ಹಚ್ಚಿ ಅಧಿಕಾರಿಗಳು ವರದಿ ತರಿಸಿ ಬಳಿಕ ಸಂಬಂಧಪಟ್ಟ ಮಾಲೀಕರನ್ನು ಕರೆಯಿಸಿ ಅವರಿಂದ ಮುಚ್ಚಳಿಕೆ ಬರೆಯಿಸಿ ಹಿಂತಿರುಗಿಸಬೇಕು ಎಂದು ತಿಳಿಸಿದರು.
ನಗರದಲ್ಲಿ ಹಂಪ್‌ಗಳಿಂದ ಆ್ಯಕ್ಸಿಡೆಂಟ್ ಜಾಸ್ತಿ ಆಗ್ತಿತ್ತು. ಹೀಗಾಗಿ ಎಲ್ಲೆಲ್ಲಿ ಅವೈಜ್ಞಾನಿಕ ಹಂಪ್‌ಗಳು ಹಾಗೂ ಅನಾವಶ್ಯಕ ಹಂಪ್‌ಗಳಿದ್ದರೆ ತೆಗೆಯುವುದಕ್ಕೆ ಸೂಚಿಸಲಾಗಿದೆ. ಜೊತೆಗೆ, ಸಿಗ್ನಲ್‌ಗಳ ಬಳಿ ಇರುವ ಹಂಪ್‌ಗಳನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವಶ್ಯಕತೆ ಇರುವೆಡೆ ರಬ್ಬರ್ ಹಂಪ್ ಹಾಕಲು ಸೂಚಿಸಲಾಗಿದೆ. ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ರೀತಿ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಕೆಲಸ ಶುರು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮತದಾರರ ಮಾಹಿತಿ ದುರುಪಯೋಗ: ಜಿಲ್ಲಾಧಿಕಾರಿ ಅರ್ಜಿ ವಿಚಾರಣೆ ಮುಂದೂಡಿಕೆ