ಬೆಂಗಳೂರು:ವಯೋಮತಿ ಮೀರುತ್ತಿರುವುದರಿಂದ ಪದವಿ ಪೂರ್ವ ಉಪನ್ಯಾಸಕರ ’ನೇಮಕಾತಿ 2015ರ’ ಹುದ್ದೆಗಳಿಗೆ ಹೆಚ್ಚುವರಿ ಹುದ್ದೆಗಳನ್ನ ಸೇರ್ಪಡೆ ಮಾಡುವಂತೆ ಉದ್ಯೋಗದ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದರು.
ವಯೋಮಿತಿ ಮೀರುತ್ತಿರುವ ಪಿಯು ಉಪನ್ಯಾಸಕರ ಆತಂಕ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1130 ಉಪನ್ಯಾಸಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಡಿಸೆಂಬರ್ 2018ರಲ್ಲಿ ಪರೀಕ್ಷೆ ನಡೆದು ಮೇ 4, 2019ರಂದು ಮೆರಿಟ್ ಲಿಸ್ಟ್ ಪ್ರಕಟ ಮಾಡಲಾಗಿತ್ತು. ಆ ಬಳಿಕ ದಾಖಲೆಗಳ ಪರಿಶೀಲನೆ ಮಾಡಿ ಆಗಸ್ಟ್ 26ರಂದು ಅಂತಿಮ ಪಟ್ಟಿ ಸಹ ಪ್ರಕಟಗೊಂಡಿತ್ತು.
ಈ ನೇಮಕಾತಿಯಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇಮಕಾತಿಗೆ ಪರಿಗಣಿಸಲಾಗಿದೆ.. ಆದರೆ 2011 ರಿಂದ ಯಾವುದೇ ಒಬ್ಬ ಉಪನ್ಯಾಸಕರ ನೇಮಕಾತಿ ನಡೆದಿಲ್ಲ. 2015-16ನೇ ಶೈಕ್ಷಣಿಕ ಸಾಲಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ ಮತ್ತೆ ಮುಂದೂಡಲ್ಪಟ್ಟು 2017 ರಲ್ಲಿ ಪುನಃ ಹೊಸಬರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಯಿತು. ಆದರೆ, ಆ ಸಾಲಿನ ಖಾಲಿ ಹುದ್ದೆಗಳನ್ನು ಇದರಲ್ಲಿ ಸೇರಿಸಿಲ್ಲ ಎಂದು ಆಕಾಂಕ್ಷಿಗಳು ಅಳಲು ತೋಡಿಕೊಂಡರು ಈಗಾಗಲೇ ವಯೋಮಿತಿ ಮೀರುತ್ತಿದ್ದು, ಮುಂದಿನ ನೇಮಕಾತಿಗೆ ಅರ್ಜಿ ಸಲ್ಲಿಸಲು ನಾವೆಲ್ಲ ಅರ್ಹರಾಗಿರುವುದಿಲ್ಲ. ಹಾಗಾಗಿ ಭರ್ತಿ ಮಾಡುತ್ತಿರುವ 1204 ಹುದ್ದೆಗಳ ಜೊತೆಗೆ ಈ 1512 ಅಥವಾ ಖಾಲಿ ಇರುವ ಹುದ್ದೆಗಳನ್ನು ಸೇರಿಸಿ ನೇಮಕಾತಿ ಮಾಡಿಕೊಳ್ಳುವಂತೆ ಸಿಎಂಗೆ ಮನವಿ ಮಾಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ವೇತನಾನುದಾನಕ್ಕೆ ಒತ್ತಾಯ
ರಾಜ್ಯದ ನಾನಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 33 ಶಾಲೆಗಳ ಶಿಕ್ಷಕ/ ಶಿಕ್ಷಕಿಯರನ್ನು ವೇತನಾನುದಾನಕ್ಕೆ ಒಳಪಡಿಸಿ ಎಂದು ಶಿಕ್ಷಕರು ಒತ್ತಾಯಿಸಿದರು.1987 ರಿಂದ 1994-95 ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲೆಗಳು ಸತತವಾಗಿ ನಡೆಯುತ್ತಿದೆ. ಹೀಗಾಗಿ ಎಲ್ಲ 33 ಶಾಲೆಗಳನ್ನು ವೇತನಾನುದಾನದ ಅಡಿ ಸೇರಿಸಿ ಎಂದು ಒತ್ತಾಯಿಸಿದರು.