ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆಸಲಾಗಿರುವ ಜಾತಿ ಜನಗಣತಿ ವರದಿ ಬಿಡುಗಡೆಗೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಶಕ್ತಿ ಪ್ರದರ್ಶನಕ್ಕೆ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಿರ್ಧರಿಸಿದೆ.
ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಡೆದ ಸಮಾಲೋಚನಾ ಸಭೆ ರಾಜಾಜಿನಗರದಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಾಲೊಚನಾ ಸಭೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು. ಸಭೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಿಡುಗಡೆಗೆ ಒತ್ತಾಯ ಕೇಳಿ ಬಂದಿತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿರುವ ಸಮೀಕ್ಷಾ ವರದಿಯನ್ನು ಈಗ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಚರ್ಚೆ ನಡೆಸಲಾಯಿತು.
ಅಲ್ಲದೆ ತಕ್ಷಣವೇ ವರದಿ ಬಿಡುಗಡೆ ಮಾಡುವಂತೆ ಬೃಹತ್ ಹೋರಾಟ ನಡೆಸುವ ಬಗ್ಗೆಯೂ ಮಾತುಕತೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕಾರ ಮಾಡಬೇಕಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸ್ವೀಕರಿಸುವಂತೆ ಸರ್ಕಾರಕ್ಕೆ ಒತ್ತಾಯ ಹಾಕೋಣ, ಸರ್ಕಾರದ ವಿರುದ್ಧ ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಈ ಸರ್ಕಾರದ ಒಬ್ಬ ಸಚಿವನಾಗಿ ನಾನು ಹೋರಾಟ ಮಾಡಲ್ಲ. ನಾವ್ಯಾರೂ ಹೋರಾಟಕ್ಕೆ ಕರೆ ಕೊಟ್ಟಿಲ್ಲ. ಸಮಾಜದ ಸ್ವಾಮೀಜಿಗಳು, ನಾಯಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡೋಣ. ಸಿಎಂ ಖಂಡಿತವಾಗಿಯೂ ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದರು.
ಅಕ್ಟೋಬರ್ 18 ರಂದು ಕುರುಬ ಸಮಾಜದ ಸಭೆ ಇದೆ. ಸಮಾಜದ ಸ್ವಾಮೀಜಿಗಳು, ನಾಯಕರು, ಪ್ರಮುಖರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರ ಪ್ರಯತ್ನದಿಂದ ಸಮೀಕ್ಷೆಯ ವರದಿ ಸ್ವೀಕಾರ ಆಗುವಂತೆ ಮಾಡೋಣ ಎಂದು ಸಭೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.