ಬೆಂಗಳೂರು: ಲಾಕ್‌ಡೌನ್ ಬಳಿಕ ಇದೇ ಮೊದಲ ಬಾರಿಗೆ ಹೈಕೋರ್ಟ್‌ನ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ಪೀಠ ವಿಡಿಯೋ ಕಾನ್ಫೆರನ್ಸ್ ಮೂಲಕ ಕಲಾಪ ನಡೆಸಿತು.
ಪ್ರಕರಣಗಳ ವಿಚಾರಣೆ ಅನಿವಾರ್ಯವಾಗಿದ್ದಲ್ಲಿ ಆ ಕುರಿತು ಇ - ಮೇಲ್ ಮೂಲಕ ಸಂಕ್ಷಿಪ್ತ ಮನವಿ ಮತ್ತು ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಅದರಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ನ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ಪೀಠ ವಿಚಾರಣೆ ನಡೆಸಿತು.
ನ್ಯಾಯಮೂರ್ತಿ ಜಾನ್ ಮೆಕಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಾಲ್ಕು ಅರ್ಜಿಗಳನ್ನು ವಿಚಾರಣೆ ನಡೆಸಿತು. ಬಳಿಕ ಅರ್ಜಿದಾರರ ತುರ್ತು ಪರಿಸ್ಥಿತಿ ಗಮನಿಸಿ ಹಾಗೂ ಮೆರಿಟ್ ಆಧಾರದಲ್ಲಿ ಪುರಸ್ಕರಿಸಿ ಜಾಮೀನು ನೀಡಿ ಆದೇಶಿಸಿತು. ಅಲ್ಲದೇ, ಆದೇಶದ ವಿವರಗಳನ್ನು ಇ-ಮೇಲ್ ಮೂಲಕವೇ ಆರೋಪಿಗಳಿರುವ ಜೈಲುಗಳಿಗೆ ಕಳುಹಿಸಿ ಕೊಡುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸೂಚಿಸಿತು.
ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗಿದ್ದ ವಕೀಲರು ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ವಕೀಲ ಎನ್. ರವೀಂದ್ರನಾಥ ಕಾಮತ್ ಅವರು ಪ್ರತಿಕ್ರಿಯಿಸಿ, ಲಾಕ್‌ಡೌನ್ ನಂತರ ಹೈಕೋರ್ಟ್‌ನ ಕ್ರಿಮಿನಲ್ ಬೆಂಚ್ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದೆ.
ಕಲಾಪಕ್ಕೆ ಯಾವುದೇ ಸಮಸ್ಯೆ ಆಗದಂತೆ ತಂತ್ರಜ್ಞಾನ ವ್ಯವಸ್ಥೆ ಮಾಡಿರುವುದು ಉತ್ತಮ ಬೆಳವಣಿಗೆ. ಈ ವ್ಯವಸ್ಥೆ ಮುಂದುವರಿಸಿದರೆ, ಪ್ರಸ್ತುತ ಸಂದರ್ಭದಲ್ಲಿ ವಕೀಲರಿಗೆ ಮತ್ತು ಕಕ್ಷೀದಾರರಿಗೆ ಬಹಳ ಅನುಕೂಲ ಆಗಲಿದೆ. ನ್ಯಾಯಾಲಯಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಾಗಲಿದೆ ಎಂದರು.
ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿರುವುದರಿಂದ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ಏಪ್ರಿಲ್.14ರ ವರೆಗೆ ರಜೆ ಘೋಷಿಸಲಾಗಿದೆ. ಆದರೆ, ನ್ಯಾಯದಾನವೂ ತುರ್ತು ಸೇವೆಯಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಅಗತ್ಯಾನುಸಾರ ತುರ್ತು ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿವೆ.