ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಬಲ ಕುಗ್ಗಿಸಲು ಕಾಂಗ್ರೆಸ್​ನಲ್ಲೇ ನಡೆದಿತ್ತೇ ಹುನ್ನಾರ? - ಶಾಸಕಾಂಗ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಈ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂಬ ಅಂಶವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ಹಲವಾರು ಕಾಂಗ್ರೆಸ್​ ನಾಯಕರು ಸಿದ್ದರಾಮಯ್ಯರು ನೀಡಿದ ರಾಜೀನಾಮೆ ವಾಪಸ್​ ತೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಶಾಸಕಾಂಗ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ , Inner Figt in congress for compress power of Siddaramaiah
ಶಾಸಕಾಂಗ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

By

Published : Dec 11, 2019, 1:59 AM IST

Updated : Dec 11, 2019, 7:22 AM IST

ಬೆಂಗಳೂರು: ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಕಾಂಗ್ರೆಸ್​ನ ಬಹುತೇಕ ಶಾಸಕರು ಇದೀಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ದುಂಬಾಲು ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆಯೂ ಇಲ್ಲ, ಪಕ್ಷದಲ್ಲಿರುವ ಒಳಜಗಳವನ್ನು ನಿಯಂತ್ರಿಸುತ್ತಾ ಕೂರುವ ಅನಿವಾರ್ಯತೆಯೂ ನನಗಿಲ್ಲ ಎಂದು ಸಿದ್ದರಾಮಯ್ಯ ಆ ಶಾಸಕರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಉಪಚುನಾವಣೆಯಲ್ಲಿನ ಸೋಲಿನ ನೈತಿಕ ಹೊಣೆ ಹೊತ್ತ ಸಿದ್ದರಾಮಯ್ಯ, ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕೈ ಪಾಳೆಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಗೆಲುವು ಗಳಿಸುವುದು ಸಹಜ. ಹಾಗೆಯೇ ವಿರೋಧ ಪಕ್ಷ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗಿರುವುದೂ ಸಹಜ. ಇದಕ್ಕಾಗಿ ನೀವು ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ.

ಬಿಜೆಪಿ ತನಗಿರುವ ಹಣಬಲ, ಆಡಳಿತ ಯಂತ್ರದ ಬಲವನ್ನು ಬಳಸಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಅದು ಎದುರಿಸಿದ ರೀತಿಯಲ್ಲಿ ಉಪಚುನಾವಣೆಯನ್ನು ನಾವು ಎದುರಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದು, ಅದೇ ರೀತಿಯ ಮಾರ್ಗದಲ್ಲಿ ಬಹುಮತ ಸಾಧಿಸಿರುವ ಬಿಜೆಪಿ ಸರ್ಕಾರವನ್ನು ಎದುರಿಸಲು ನೀವು ಪಕ್ಷದ ಶಾಸಕಾಂಗ ನಾಯಕನ ಸ್ಥಾನದಲ್ಲಿ ಇರಲೇಬೇಕು. ನಿಮ್ಮ ಅನುಭವ,ಶಕ್ತಿಯಿಂದ ನೀವು ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ಬಲ ತುಂಬಿದ್ದೀರಿ.ಆಳುವ ಸರ್ಕಾರ ಸದಾ ಕಾಲ ಎಚ್ಚರದಿಂದಿರುವಂತೆ ಮಾಡಿದ್ದೀರಿ. ಹೀಗಿರುವಾಗ ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣಕ್ಕಾಗಿ ಶಾಸಕಾಂಗ ನಾಯಕನ ಸ್ಥಾನಕ್ಕೆ ನೀವು ರಾಜೀನಾಮೆ ನೀಡಿರುವುದು ಸರಿಯಲ್ಲ.

ಹೀಗಾಗಿ ನಾವೇ ಪಕ್ಷದ ಹೈಕಮಾಂಡ್ ಅವರೊಂದಿಗೆ ಚರ್ಚಿಸುತ್ತೇವೆ. ನಿಮ್ಮನ್ನುಹೊರತುಪಡಿಸಿ ಬೇರೆ ಯಾರೂ ಈ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂಬ ಅಂಶವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದು ಶಾಸಕರ ಪಡೆ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಬಿಲ್ ಕುಲ್ ಅದನ್ನು ಒಪ್ಪಲಿಲ್ಲ. ಉಪಚುನಾವಣೆಯಲ್ಲಿ ಪಕ್ಷ ಕೇವಲ ಎರಡು ಸ್ಥಾನಗಳನ್ನು ಗಳಿಸಿದೆ. ಆದರೆ ನನ್ನ ಪ್ರಕಾರ ಕನಿಷ್ಠ 6 ರಿಂದ 7 ಸ್ಥಾನಗಳಲ್ಲಿ ಗೆಲ್ಲಬೇಕಿತ್ತು. ಆದರೆ ನಮ್ಮ ಪಕ್ಷದವರು ಉಪಚುನಾವಣೆಗಿಂತ ಮುಂಚೆ ಅನಗತ್ಯ ಮಾತುಗಳನ್ನಾಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಐಕ್ಯತೆಯಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡಿದರು. ಉಪಚುನಾವಣೆಯ ಸಂದರ್ಭದಲ್ಲಿ ಮರಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂಬಂತಹ ಮಾತುಗಳನ್ನಾಡುವ ಅಗತ್ಯವಿರಲಿಲ್ಲ. ಯಾವ ಕಾರಣಕ್ಕೂ ಜೆಡಿಎಸ್ ಜತೆ ಸಂಬಂಧ ಬೇಡ ಎಂಬ ಕಾರಣಕ್ಕಾಗಿಯೇ ಪಕ್ಷದ ಹದಿನಾಲ್ಕು ಮಂದಿ ಶಾಸಕರು ರಾಜೀನಾಮೆ ನೀಡಿದ್ದರು.

ಮೈತ್ರಿ ಸರ್ಕಾರ ಬಂದರೆ ದೇವೇಗೌಡರ ಪುತ್ರ ರೇವಣ್ಣ ಅವರಿಗೆ ಲಾಭವೇ ಹೊರತು ತಮಗಲ್ಲ ಎಂದು ಹಲವು ಬಾರಿ ದೂರಿದ್ದ ಶಾಸಕರೇ ಅನಿವಾರ್ಯವಾಗಿ ಪಕ್ಷ ತೊರೆದು ಹೋದರು. ಅದರ ಫಲವಾಗಿ ನಾವು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಇದು ಗೊತ್ತಿದ್ದರೂ ಮರಳಿ ಮೈತ್ರಿ ಸರ್ಕಾರವನ್ನು ತರುತ್ತೇವೆ ಎಂಬ ಮಾತುಗಳನ್ನು ನಮ್ಮ ಪಕ್ಷದವರೇ ಮಿತಿ ಮೀರಿ ಆಡತೊಡಗಿದಾಗ ಹಲವು ಶಕ್ತಿಗಳು ಉಲ್ಟಾ ಹೊಡೆದವು.

ಹೀಗಾಗಿ ಗೆಲ್ಲಬೇಕಾದ ಕ್ಷೇತ್ರಗಳಲ್ಲೂ ಪರಿಸ್ಥಿತಿ ಬಿಜೆಪಿಗೆ ಅನುಕೂಲಕರವಾಯಿತು. ಹಾಗಂತ ಇದೇನೂ ಮೈಮರೆವಿನಿಂದಾಗಿ ಬಂದ ಹೇಳಿಕೆಗಳಲ್ಲ. ಬದಲಿಗೆ ನನ್ನನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಬೇಕು ಎಂಬ ಬಯಕೆಯಿಂದಲೇ ಹೊರಬಂದ ಮಾತುಗಳು. ಹೀಗೆ ಪಕ್ಷದಲ್ಲಿ ನನ್ನ ಕೈಯ್ಯನ್ನು ದುರ್ಬಲಗೊಳಿಸಲು ಹಲವರು ಕಾದಿದ್ದಾಗ ನಾನೇಕೆ ವಿನಾಃಕಾರಣ ಪಕ್ಷದ ಶಾಸಕಾಂಗ ನಾಯಕನ ಜಾಗದಲ್ಲಿ ಕುಳಿತುಕೊಳ್ಳಲಿ?. ಬೇಕಿದ್ದರೆ ಮೈತ್ರಿ ಸರ್ಕಾರವನ್ನು ಮರಳಿ ತರುವ ಕನಸಿರುವವರು, ತಮ್ಮ ಶಕ್ತಿಯಲ್ಲಿ ಅಪಾರ ನಂಬಿಕೆ ಇರುವವರು ಆ ಜಾಗವನ್ನುಅಲಂಕರಿಸಲಿ. ಪಕ್ಷದ ಹೈಕಮಾಂಡ್ ಅಂತವರಿಗೆ ಅವಕಾಶ ನೀಡಲಿ. ನಾನು ಕೇವಲ ಶಾಸಕನಾಗಿ, ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ.

ಯಾರೇ ಪಕ್ಷ ಕಟ್ಟಲಿ, ಸಹಕಾರ ನೀಡುತ್ತೇನೆಯೇ ವಿನಃ ನಾನು ಆ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನೀಡಿರುವ ರಾಜೀನಾಮೆಯನ್ನೂ ಹಿಂಪಡೆಯುವುದಿಲ್ಲ ಎಂದು ಸಿದ್ದರಾಮಯ್ಯ ಶಾಸಕರಿಗೆ ಖಂಡತುಂಡವಾಗಿ ಹೇಳಿದ್ದಾರೆ ಎಂದು ಉನ್ನತಮೂಲಗಳು ತಿಳಿಸಿವೆ.

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ದಿನೇಶ್ ಗುಂಡೂರಾವ್ ಅವರು ಕೂಡಾ ತಮಗೆ ಈ ಹುದ್ದೆಬೇಡ ಎಂಬ ನಿಲುವು ತಳೆದಿದ್ದು, ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮುಂದುವರಿದಿದೆ.

Last Updated : Dec 11, 2019, 7:22 AM IST

ABOUT THE AUTHOR

...view details