ಬೆಂಗಳೂರು: ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಪ್ರಬಲರಾಗಿರುವ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರನ್ನು ಎದುರು ಹಾಕಿಕೊಂಡಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕಂಟಕವಾಗಿ ಪರಿಣಮಿಸಿದೆ ಎಂಬ ಮಾಹಿತಿ ಲಭಿಸಿದೆ.
ಕಳೆದ ಒಂದೆರಡು ತಿಂಗಳಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ನಡುವಿನ ಸಂಬಂಧ ಹಳಸಿದ್ದು ಅವರ ಬೆಂಬಲಿಗರ ಮೂಲಕ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಹೈಕಮಾಂಡ್ ಮಟ್ಟದಲ್ಲಿ ಪ್ರಬಲವಾಗಿರುವ ಪರಮೇಶ್ವರ್, ರಾಷ್ಟ್ರ ರಾಜಕಾರಣದತ್ತ ಗಮನ ಹರಿಸಿದ್ದು ರಾಜ್ಯರಾಜಕಾರಣದಲ್ಲಿ ಇನ್ನಷ್ಟು ಪ್ರಬಲವಾಗುವ ಸಿದ್ದರಾಮಯ್ಯ ಕನಸಿಗೆ ತಡೆ ಒಡ್ಡುವ ಯತ್ನವನ್ನು ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಬಹುತೇಕ ಕಾರ್ಯಕ್ರಮಗಳು ಸಭೆ ಸಮಾರಂಭಗಳಿಂದ ದೂರವೇ ಉಳಿದಿರುವ ಪರಮೇಶ್ವರ್, ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ ಎಂಬ ಮಾಹಿತಿ ಇದೆ.
ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ, ಸದ್ಯ ಖಾಲಿ ಇರುವ ಕಾಂಗ್ರೆಸ್ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಆಗಿದ್ದು, ಇದುವರೆಗೂ ಈ ಸ್ಥಾನಕ್ಕೆ ಪೈಪೋಟಿ ನಡೆಸದ ಪರಮೇಶ್ವರ್ ಈಗ ಪ್ರತಿಷ್ಠೆಯಾಗಿ ಈ ಸ್ಥಾನವನ್ನು ಪರಿಗಣಿಸಿದ್ದಾರೆ. ಶತಾಯಗತಾಯ ಸಿದ್ದರಾಮಯ್ಯಗೆ ಸಿಗದಂತೆ ನೋಡಿಕೊಳ್ಳುವ ಯತ್ನ ಮಾಡಿದ್ದಾರೆ. ಈಗಾಗಲೇ ಜೈಲು ಸೇರಿರುವ ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೆಸರು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಈ ಹಿಂದೆ ಕೇಳಿಬಂದಿತ್ತು. ಇವರು ಸಿದ್ದರಾಮಯ್ಯಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. ಆದರೆ, ಇವರ ಅನುಪಸ್ಥಿತಿಯಿಂದ ಸ್ಪರ್ಧಾ ಕಣದಲ್ಲಿ ತಮಗೆ ಎದುರಾಳಿಯೇ ಇಲ್ಲದಂತಾಗಿ ಸಿದ್ದರಾಮಯ್ಯ ನಿರಾಳವಾಗಿದ್ದರು. ಆದರೆ, ಇದೀಗ ಪರಮೇಶ್ವರ್ ಈ ಸ್ಥಾನಕ್ಕೆ ಖುದ್ದು ಪೈಪೋಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಒಂದೊಮ್ಮೆ ತಮ್ಮನ್ನು ರಾಷ್ಟ್ರ ರಾಜಕಾರಣಕ್ಕೆ ಕಾಂಗ್ರೆಸ್ ಬಯಸಿದರೆ ತಮ್ಮ ಆಪ್ತರನ್ನು ಈ ಸ್ಥಾನಕ್ಕೆ ತಂದು ಕೂರಿಸುವ ಯತ್ನವನ್ನು ಪರಮೇಶ್ವರ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯಗೆ ಆತಂಕ:
ಈ ಎಲ್ಲ ಬೆಳವಣಿಗೆಯ ಜೊತೆಗೆ ತಮ್ಮದೇ ಆದ ತಂಡ ಕಟ್ಟಿಕೊಂಡು ಮುಂದುವರಿಯಲು ಯತ್ನಿಸಿದ್ದ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಶಾಕ್ ನೀಡಿದೆ. ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೇರೊಬ್ಬರ ಹುಡುಕಾಟವನ್ನು ನಡೆಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಇದರ ಜೊತೆಜೊತೆಗೆ ಪಕ್ಷವನ್ನು ಸಮರ್ಥವಾಗಿ ಕಟ್ಟಿ ನಿಭಾಯಿಸುವಲ್ಲಿ ವಿಫಲರಾಗಿರುವ ಆರೋಪದ ಮೇಲೆ ಸಿದ್ದರಾಮಯ್ಯರ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನೂ ಪದವಿಯಿಂದ ಕೆಳಗಿಳಿಸುವ ಚಿಂತನೆಯನ್ನು ಕಾಂಗ್ರೆಸ್ ಹೈಕಮಾಂಡ್ ಮಾಡಿದೆ ಎಂಬ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಗೂ ಪತನದ ನಂತರ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಕಟ್ಟುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರ ಬೀಳಿಸಲು ಮುಂದಾಗಿದ್ದ ತಮ್ಮ ಆಪ್ತರನ್ನು ತಡೆಯುವಲ್ಲಿ ಕೂಡ ಇವರು ವಿಫಲರಾಗಿದ್ದರು. ರಾಜ್ಯದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರನ್ನ ಒಟ್ಟಾಗಿ ಕರೆದುಕೊಂಡು ಹೋಗುವ ಕಾರ್ಯವನ್ನು ಅವರು ಮಾಡುತ್ತಿಲ್ಲ. ಇದರಿಂದ ಪರ್ಯಾಯ ನಾಯಕರನ್ನು ಹುಡುಕುವ ಪ್ರಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆಯಂತೆ.