ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 81 ಮಂದಿ ಕೈದಿಗಳಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿತು. ಸನ್ನಡತೆಯ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 214 ಜನ ಕೈದಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 81 ಜನ ಕೈದಿಗಳನ್ನೂ ಇಂದು ಬಿಡುಗಡೆ ಮಾಡಲಾಯಿತು.
ಉತ್ತಮ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರದ ಆದೇಶದಂತೆ ಕೈದಿಗಳಿಂದ 'ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ, ಕೆಟ್ಟ ವ್ಯಕ್ತಿಗಳ ಜೊತೆ ಸೇರುವುದಿಲ್ಲ' ಎಂದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಲಾಗಿದೆ. ಮಂಗಳವಾರ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ ಒಟ್ಟು ಎಂಬತ್ತೊಂದು ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.
ಇದನ್ನೂ ಓದಿ :ಸನ್ನಡತೆ ತೋರಿದ ಒಂದೇ ಕುಟುಂಬದ ನಾಲ್ವರು ಸೇರಿ ವಿಜಯಪುರದ 10 ಕೈದಿಗಳಿಗೆ ಬಿಡುಗಡೆ ಭಾಗ್ಯ
ಕಳೆದ ವರ್ಷ ಬಿಡುಗಡೆಯಾಗಿದ್ದ ಕೈದಿಗಳ ವಿವಿರ: ಕಳೆದ ವರ್ಷದ ಮಾರ್ಚ್ 12 ರಂದು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಮಂದಿ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಪಳನಿ, ಭೀಮನಗೌಡ, ರಾಚಪ್ಪ, ಜಗನ್ನಾಥ, ಸುರೇಶ್, ಮಹಾದೇವಿ ಭಡನೋರ್ ಸೇರಿ 18 ಜನರನ್ನು ಬಿಡುಗಡೆ ಮಾಡಲಾಗಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷಗಳ ಕಾಲ ಕಲಬುರಗಿ ಜಿಲ್ಲೆ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಬಂಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸ್ಥಾಯಿ ಸಲಹಾ ಸಮಿತಿ ಶಿಫಾರಸಿನಂತೆ ಸರ್ಕಾರಕ್ಕೆ ಕಳಿಸಲಾಗಿತ್ತು.