ಬೆಂಗಳೂರು: ಸರಗಳ್ಳತನ, ದರೋಡೆ ಸೇರಿದಂತೆ 34 ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಚಂದ್ರಾಲೇಔಟ್ ಪೊಲೀಸರಿಂದ ಬಂಧನಕ್ಕೊಳಗಾಗಿ ಸೆಂಟ್ರಲ್ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೆ.ಪಿ ಅಗ್ರಹಾರ ನಿವಾಸಿಯಾಗಿರುವ ಗಜೇಂದ್ರ ಆಲಿಯಾಸ್ ದಾಲಿ ಮೃತಪಟ್ಟಿರುವ ಕೈದಿಯಾಗಿದ್ದಾನೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಗಜೇಂದ್ರ ಜೈಲು ಸೇರಿದ್ದ. ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇರೆಗೆ ಹೊರಬಂದಿದ್ದ. ಜು.31ರಂದು ಗಿರಿನಗರ ಸೇರಿ ವಿವಿಧ ಕಡೆಗಳಲ್ಲಿ ತನ್ನ ಸಹಚರರೊಂದಿಗೆ ಸೇರಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ.
ಆ.12ರಂದು ಚಂದ್ರಾಲೇಔಟ್ ವ್ಯಾಪ್ತಿಯ ವೃದ್ದೆಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಿರಿನಗರದಲ್ಲಿ ಗಜೇಂದ್ರ ಸೇರಿದಂತೆ ಆತನ ಸಹಚರರು ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಬಂಧಿಸಲು ಮುಂದಾಗಿದ್ದರು. ಈ ವೇಳೆ, ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಟ್ಟಡದಿಂದ ಹಾರಿ ಕೆಳಗೆ ಬಿದ್ದು ಎಡಗಾಲಿಗೆ ಗಾಯವಾಗಿತ್ತು.
ಬಳಿಕ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆ.17ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅದೇ ದಿನ ರಾತ್ರಿ ವಿಪರೀತ ಕಾಲು ನೋವು ಹೆಚ್ಚಾದ ಹಿನ್ನೆಲೆ ಜೈಲಾಧಿಕಾರಿಗಳ ಅನುಮತಿ ಪಡೆದು ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ನಿನ್ನೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ:ರಾಜಧಾನಿಯಲ್ಲಿ ರಾತ್ರಿ ವೇಳೆ ಹೆಚ್ಚುತ್ತಿರುವ ಕ್ರೈಂ ರೇಟ್ಗೆ ಬ್ರೇಕ್ ಹಾಕಲಿದೆ 'ಸುಭಾಹು ಇ-ಬೀಟ್' ಸಿಸ್ಟಮ್!