ಕರ್ನಾಟಕ

karnataka

ETV Bharat / state

ವಂಶಪಾರಂಪರ್ಯ ಅರ್ಚಕ ವೃತ್ತಿ ಪಡೆಯಲು ತಂದೆ ಕಡೆಯಿಂದ ಉತ್ತರಾಧಿಕಾರ ಅಗತ್ಯ: ಹೈಕೋರ್ಟ್

ದೇವಾಲಯದ ಅರ್ಚಕ ವೃತ್ತಿ ಪಡೆದುಕೊಳ್ಳಲು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ವಜಾಗೊಳಿಸಿ ಆದೇಶ ನೀಡಿದೆ.

By

Published : Jun 3, 2023, 8:37 PM IST

inheritance-from-father-side-necessary-for-hereditary-priestly-profession-high-court
ವಂಶಪಾರಂಪರ್ಯ ಅರ್ಚಕ ವೃತ್ತಿ ಪಡೆಯಲು ತಂದೆ ಕಡೆಯಿಂದ ಉತ್ತರಾಧಿಕಾರ ಅಗತ್ಯ: ಹೈಕೋರ್ಟ್

ಬೆಂಗಳೂರು :ವಂಶಪಾರಂಪರ್ಯವಾಗಿ ದೇವಾಲಯವೊಂದರ ಅರ್ಚಕ ವೃತ್ತಿ ಪಡೆದುಕೊಳ್ಳಲು ಉತ್ತರಾಧಿಕಾರ ಸಂಬಂಧ ತಂದೆಯ ಕಡೆಯಿಂದ ಇರಬೇಕು. ತಾಯಿ ಕಡೆಯಿಂದ ಇದ್ದಲ್ಲಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದೇವಾಲಯವೊಂದರಲ್ಲಿ ತಾಯಿಯ ತಂದೆ (ಅಜ್ಜ) ಮತ್ತು ತಂದೆ ಹಲವು ವರ್ಷಗಳ ಕಾಲ ಅರ್ಚಕರಾಗಿ ಪೂಜಾ ಕಾರ್ಯಗಳಲ್ಲಿ ತೊಡಗಿದ್ದು, ಅದೇ ವೃತ್ತಿಗೆ ತಮ್ಮನು ನಿಯೋಜನೆ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ಕೆ.ಆರ್​.ಪುರದ ಎಂ.ಎಸ್​. ರವಿ ದೀಕ್ಷಿತ್​, ಎಂ.ಎಸ್​. ವೆಂಕಟೇಶ್​ ದೀಕ್ಷಿತ್​ ಹೈಕೋರ್ಟ್​​ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್​.ಎಸ್​. ಸಂಜಯ್​ ಗೌಡ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಅಲ್ಲದೆ, ಅರ್ಚಕ ವೃತ್ತಿನನ್ನು ವಂಶಪಾರಂಪರ್ಯವಾಗಿ ಮುಂದುವರೆಸಬೇಕು ಎಂಬ ಬೇಡಿಕೆ ಇಡಬೇಕಾದಲ್ಲಿ ಅರ್ಜಿದಾರರ ತಂದೆ ಮಾತ್ರವಲ್ಲ, ಅಜ್ಜ, ಮುತ್ತಜ್ಜ ಕೂಡ ಅದೇ ದೇವಾಲಯದಲ್ಲಿ ಅರ್ಚಕರಾಗಿ ಮುಂದುವರೆದಿರಬೇಕು. ಆದರೆ, ಅರ್ಜಿದಾರರ ತಂದೆ ಮತ್ತು ಅರ್ಜಿದಾರರ ತಾಯಿಯ ತಂದೆ(ಅಜ್ಜ) ಅರ್ಚಕರಾಗಿದ್ದರು ಎಂಬ ಕಾರಣ ನೀಡಿ ಅದೇ ವೃತ್ತಿಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಮನವಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ ಏನು ? :ಕೆ ಆರ್​ ಪುರದ ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕರಾಗಿದ್ದ ಎಂ.ಎನ್​. ಸುಬ್ರಹ್ಮಣ್ಯ ದೀಕ್ಷಿತ್ ಅವರು 2011ರಂದು ಮೃತರಾದರು. ಇದಾದ ಬಳಿಕ ಅವರ ಮಕ್ಕಳಾದ ಎಂ.ಎಸ್​. ರವಿ ದೀಕ್ಷಿತ್​ ಅವರು ನಮ್ಮ ತಂದೆ ಮತ್ತು ಅಜ್ಜ ಅದೇ ದೇವಾಲಯದಲ್ಲಿ ಅರ್ಚಕ ವೃತ್ತಿ ಮುಂದುವರೆಸಿವುದಕ್ಕೆ ಅರ್ಹತೆ ಹೊಂದಿದ್ದೇವೆ. ಹೀಗಾಗಿ ವಂಶಪಾರಂಪರ್ಯದ ಆಧಾರದಲ್ಲಿ ನಮ್ಮನ್ನೇ ಅರ್ಚಕರನ್ನಾಗಿ ನೇಮಕ ಮಾಡಬೇಕು ಎಂದು ಕೋರಿ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದಾರ್ಮಿಕ ದತ್ತಿ ಇಲಾಖೆಗೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿತ್ತು. ಜೊತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಅರ್ಜಿದಾರರ ಸಹೋದರರಾದ ಎಂ.ಎಸ್. ಜಗದೀಶ್​ ದೀಕ್ಷಿತ್​ ಮತ್ತು ಎಂ.ಎಸ್​.ರವಿ ದೀಕ್ಷಿತ್​ ಅವರ ಹಾಗೂ ಈ ಸಂಬಂಧ ಇತರೆ ಆಸಕ್ತಿಯುಳ್ಳವರ ಮನವಿ ಸಲ್ಲಿಸಿದ್ದರೂ, ಅವರನ್ನೂ ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚನೆ ನೀಡಿತ್ತು.

ಹೈಕೋರ್ಟ್ ಆದೇಶದಂತೆ ಅರ್ಜಿದಾರರ ಮನವಿಯನ್ನು ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಅರ್ಜಿದಾರರ ಪೂರ್ವಜರು ಕಳೆದ ಮೂರು ತಲೆಮಾರುಗಳಿಂದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಅರ್ಚಕ ವೃತ್ತಿ ಮುಂದುವರೆಸಿಕೊಂಡು ಬಂದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಅರ್ಜಿದಾರರನ್ನು ಅರ್ಚಕ ವೃತ್ತಿಯಲ್ಲಿ ಮುಂದುವರೆಸುವುದಕ್ಕೆ ಸಾಧ್ಯವಿಲ್ಲ ಎಂದು ಆದೇಶಿಸಲಾಗಿತ್ತು.

ಅಲ್ಲದೆ, ಅರ್ಜಿದಾರರ ತಂದೆ ಎಂ.ಎನ್​. ಸುಬ್ರಹ್ಮಣ್ಯ ದೀಕ್ಷಿತ್​ ಅವರು 1979ರ ಆಗಸ್ಟ್​ 23ರಂದು ಅರ್ಚಕರಾಗಿ ನೇಮಕಗೊಂಡಿದ್ದರು. ಅವರ ಮಾವ ದಿವಂಗತ ನಂಜುಂಡ​ ದೀಕ್ಷಿತ್​ ಅವರು ಸುಮಾರು 45 ವರ್ಷಗಳ ಕಾಲ ಅದೇ ದೇವಾಲಯದಲ್ಲಿ ಎಂಬ ಅಂಶ ತಹಶೀಲ್ದಾರ್​ ಅವರಿಗೆ ಬರೆದ ಪತ್ರದಲ್ಲಿ ತಿಳಿದುಬಂದಿತ್ತು. ಹೀಗಾಗಿ ಅರ್ಜಿದಾರರ ತಾಯಿಯ ಕಡೆಯಿಂದ ಅರ್ಚಕ ವೃತ್ತಿ ಮುಂದುವರೆದಿದ್ದಾಗಿದೆ ಎಂಬ ಅಂಶ ಗೊತ್ತಾಗಿದೆ. ಈ ನಿಟ್ಟಿನಲ್ಲಿ ವಂಶಪಾರಂಪರ್ಯವಾಗಿ ತಮ್ಮ ಹಕ್ಕನ್ನು ಪಡೆಯುವುದಕ್ಕೆ ಅರ್ಹರಾಗಿರುವುದಿಲ್ಲ ಎಂದು ಇಲಾಖೆ ಆದೇಶಿಸಿತ್ತು.

ಈ ನಡುವೆ ಸುಬ್ರಹ್ಮಣ್ಯ ದೀಕ್ಷಿತ್ ಅವರ ಮತ್ತೊಬ್ಬ ಮಗ ಎಂ.ಎಸ್​. ವೆಂಕಟೇಶ್​ ದೀಕ್ಷಿತ್​ ಹೈಕೋರ್ಟ್​​ ಅರ್ಜಿ ಸಲ್ಲಿಸಿದ್ದು, ತನ್ನನ್ನು ಅರ್ಚಕರ ವೃತ್ತಿಗೆ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು. ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಿದ ನ್ಯಾಯಪೀಠದ ಮುಂದೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು ದೇವಾಲಯದ ಅರ್ಚಕರಾಗಲು ಅರ್ಹರಿದ್ದು ನೇಮಕ ಮಾಡಿಕೊಳ್ಳವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಶ್ರೀ ಮಹಾಬಲೇಶ್ವರ ದೇವಾಲಯದ ಅರ್ಚಕ ವೃತ್ತಿಗೆ ಅರ್ಹರನ್ನು ನೇಮಕ ಮಾಡುವ ಸಲುವಾಗಿ ಅರ್ಜಿಗಳನ್ನು ಅಹ್ವಾನಿಸಿದ್ದು, ಅರ್ಹರನ್ನು ನೇಮಕ ಮಾಡಲು ಅಗತ್ಯ ಕ್ರಮಗಳನ್ನು ಕೆಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದರು.

ಇದೇ ವಿಚಾರ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಿದ್ದವರ ಪರ ವಕೀಲರು, ಅರ್ಜಿದಾರರ ಅರ್ಚಕ ವೃತ್ತಿಗೆ ಅರ್ಹರಲ್ಲ. ಈ ಕುರಿತಂತೆ ಅರ್ಜಿದಾರರ ತಂದೆಯವರು ತಹಶೀಲ್ದಾರ್​ ಅವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಅರ್ಜಿದಾರರನ್ನು ಅರ್ಚಕರನ್ನಾಗಿ ನೇಮಕ ಮಾಡಬಾರದು ಎಂದು ಪೀಠಕ್ಕೆ ಕೋರಿದರು.

ABOUT THE AUTHOR

...view details