ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ವತಿಯಿಂದ 6 ವರ್ಗಗಳ ವಿಜೇತರಿಗೆ 'ಇನ್ಫೋಸಿಸ್ 2020' ಪ್ರಶಸ್ತಿ ಪ್ರದಾನ - Infosys Science Foundation Award
ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುತ್ತಮ ಸಾಧನೆ ತೋರಿದ ವಿಜೇತರಿಗೆ 2020ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಮಾಡಿತು.

ಬೆಂಗಳೂರು: ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ಐಎಸ್‌ಎಫ್)ನಲ್ಲಿಂದು ನಡೆದ ವರ್ಚುವಲ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಅತ್ಯುತ್ತಮ ಸಾಧನೆ ತೋರಿದ ವಿಜೇತರಿಗೆ 2020ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರದಾನ ಮಾಡಿತು. ಈ ಪ್ರಶಸ್ತಿ ಒಂದು ಶುದ್ಧ ಚಿನ್ನದ ಪದಕ, ಒಂದು ಪ್ರಮಾಣಪತ್ರ ಮತ್ತು 100,000 ಅಮೆರಿಕನ್ ಡಾಲರ್ ಹಣವನ್ನು ಒಳಗೊಂಡಿದೆ.
ಈ ಪ್ರಶಸ್ತಿಯನ್ನು ಆರು ಕ್ಷೇತ್ರಗಳಲ್ಲಿ ಅತ್ಯುದ್ಭುತ ಸಾಧನೆ ತೋರಿದವರಿಗೆ ನೀಡಲಾಗುತ್ತದೆ. ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವೀಯತೆ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತಿಕ ವಿಜ್ಞಾನ ಮತ್ತು ಸಮಾಜ ವಿಜ್ಞಾನ. ನುರಿತ ತೀರ್ಪುಗಾರರ ತಂಡ ಘೋಷಿಸಿದ ವಿಜೇತರಿಗೆ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಮೆರಿಕದ ನ್ಯೂಯಾರ್ಕ್‌ನ ಕೌರಂಟ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್‌ನ ಪ್ರೊಫೆಸರ್ ಮತ್ತು ಅಬೆಲ್ ಪ್ರಶಸ್ತಿ ವಿಜೇತ ಪ್ರೊ.ಎಸ್.ಆರ್.ಶ್ರೀನಿವಾಸ್ ವರ್ಧನ್ ಪ್ರಶಸ್ತಿ ಪ್ರದಾನ ಮಾಡಿದರು.
2020ರ ಇನ್ಫೋಸಿಸ್ ಪ್ರಶಸ್ತಿಗೆ ಬಂದಿದ್ದ 257 ನಾಮನಿರ್ದೇಶನಗಳ ಪರಿಣತ ವಿದ್ವಾಂಸರು ಮತ್ತು ಪ್ರೊಫೆಸರ್‌ಗಳನ್ನೊಳಗೊಂಡ ತೀರ್ಪುಗಾರರ ತಂಡ ವಿಜೇತರನ್ನು ಆಯ್ಕೆ ಮಾಡಿದೆ. ತೀರ್ಪುಗಾರರ ತಂಡ- ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನಕ್ಕಾಗಿ ಪ್ರೊ. ಅರವಿಂದ್ (ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಗಣಿತ ವಿಜ್ಞಾನಕ್ಕಾಗಿ ಪ್ರೊ.ಚಂದ್ರಶೇಖರ್ ಖರೆ (ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಜಲೀಸ್), ಭೌತ ವಿಜ್ಞಾನಕ್ಕಾಗಿ ಪ್ರೊ.ಶ್ರೀನಿವಾಸ್ ಕುಲಕರ್ಣಿ (ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಮತ್ತು ಲೈಫ್ ಸೈನ್ಸ್‌ಗಾಗಿ ಪ್ರೊ.ಮ್ರೀಗಂಕಾ ಸುರ್ (ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಆಯ್ಕೆಯಾಗಿದ್ದಾರೆ.
ಇನ್ಫೋಸಿಸ್ ಪ್ರಶಸ್ತಿ ಅತ್ಯದ್ಭುತ ಪ್ರತಿಭೆಗಳನ್ನು ಗೌರವಿಸಿದ ಇತಿಹಾಸ ಹೊಂದಿದೆ. ಈ ಪ್ರಶಸ್ತಿ ವಿಜೇತರಲ್ಲಿ ಕೆಲವರು ಆರ್ಥಿಕ ವಿಜ್ಞಾನದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿ, ಕ್ಷೇತ್ರದ ಸಾಧನೆಯ ಪದಕಗಳು ಮತ್ತು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಅಂತಾರಾಷ್ಟ್ರೀಯ ಗೌರವಗಳಿಗೆ ಭಾಜನರಾಗಿದ್ದಾರೆ. ಈ ವರ್ಷದ ವಿಜೇತರು ಕೂಡ ಅವರ ಕ್ಷೇತ್ರಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಲಿದ್ದಾರೆ ಎಂದು ಐಎಸ್‌ಎಫ್ ವಿಶ್ವಾಸ ಹೊಂದಿದೆ. ಇನ್ಫೋಸಿಸ್ ಪ್ರಶಸ್ತಿ ಅಪರೂಪದ ಸಂಶೋಧನೆ ಅನ್ವಯಿಕ ಮತ್ತು ಸೈದ್ಧಾಂತಿಕ ಕ್ಷೇತ್ರಗಳಲ್ಲಿ ಅವರ ಸಾಧನೆಗಳನ್ನು ಗುರುತಿಸಿ, ಗೌರವಿಸುವ ಮೂಲಕ ಯುವಮನಸ್ಸುಗಳಿಗೆ ವಿಜ್ಞಾನ ಮತ್ತು ಸಂಶೋಧನೆಯನ್ನು ಅವರ ವೃತ್ತಿ ಆಯ್ಕೆಯನ್ನಾಗಿಸುವ ಗುರಿ ಹೊಂದಿದೆ.
ಪ್ರಶಸ್ತಿ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಇನ್ಫೋಸಿಸ್ ಸೈನ್ಸ್ ಫೌಂಡೇಶನ್‌ನ ಸ್ಥಾಪಕ - ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, “ಇನ್ಫೋಸಿಸ್ ಸೈನ್ಸ್ ಫೌಂಡೇಶನ್‌ನ ಟ್ರಸ್ಟಿಗಳು ಭಾರತದ ಪ್ರತಿ ಬಡ ಮಕ್ಕಳು ಪೌಷ್ಠಿಕಾಂಶ, ಶಿಕ್ಷಣ, ಆರೋಗ್ಯ ಮತ್ತು ಆಶ್ರಯವನ್ನು ಪಡೆಯಬಹುದು ಎಂಬ ಕನಸು ಕಾಣುತ್ತಿದ್ದಾರೆ. ಈ ಮಕ್ಕಳು ಉತ್ತಮ ಭವಿಷ್ಯದ ಆತ್ಮವಿಶ್ವಾಸ ಹೊಂದಿರಬೇಕು ಎಂದು ಅವರು ಬಯಸುತ್ತಾರೆ. ಅದಕ್ಕಾಗಿ, ನಮಗೆ ಭ್ರಷ್ಟಾಚಾರರಹಿತ ಮತ್ತು ತ್ವರಿತ ಕಾರ್ಯಗತಗೊಳ್ಳುವ ಉತ್ತಮ ಚಿಂತನೆ ಮತ್ತು ಪರಿಣಾಮಕಾರಿ ವಿಚಾರಗಳ ಅವಶ್ಯಕತೆಯಿದೆ. ಅಭಿವೃದ್ಧಿ ಹೊಂದಿದ ದೇಶಗಳು ಮುಖ್ಯವಾಗಿ ತಮ್ಮ ಉನ್ನತ ಶಿಕ್ಷಣ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಯಶಸ್ವಿಯಾಗಿವೆ. ನಮ್ಮ ಜಗತ್ತನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಗೌರವಿಸುವ ಮೂಲಕ ಇನ್ಫೋಸಿಸ್ ಪ್ರಶಸ್ತಿ ಭಾರತದಲ್ಲಿ ಈ ಕಾರ್ಯಾಚರಣೆಗೆ ಕೊಡುಗೆ ನೀಡುತ್ತದೆ ” ಎಂದಿದ್ದಾರೆ.
ವರ್ಚುವಲ್ ಸಮಾರಂಭದಲ್ಲಿ ಇನ್ಫೋಸಿಸ್ ಸೈನ್ಸ್ ಫೌಂಡೇಶನ್‌ನ ಟ್ರಸ್ಟಿಗಳಾದ ನಾರಾಯಣ ಮೂರ್ತಿ (ಬೋರ್ಡ್ ಆಫ್ ಟ್ರಸ್ಟಿ ಅಧ್ಯಕ್ಷ) ಶ್ರೀನಾಥ್ ಬಟ್ನಿ, ಕೆ. ದಿನೇಶ್, ಶ್ರೀ ಎಸ್. ಗೋಪಾಲಕೃಷ್ಣನ್, ನಂದನ್ ನಿಲೇಕಣಿ, ಮೋಹನ್‌ದಾಸ್ ಪೈ, ಮತ್ತು ಎಸ್.ಡಿ.ಶಿಬುಲಾಲ್ ಹಾಜರಿದ್ದರು. ಟ್ರಸ್ಟಿಗಳು ಮತ್ತು ತೀರ್ಪುಗಾರರ ಸದಸ್ಯರ ಜೊತೆಗೆ, ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಮತ್ತು ವ್ಯಾಪಾರ ಕ್ಷೇತ್ರದ ಮುಖಂಡರು, ಯುವ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.