ಬೆಂಗಳೂರು: ಸಮಾಜದ ಮಟ್ಟದಲ್ಲಿ ವಿಜ್ಞಾನದ ಆವಿಷ್ಕಾರಗಳಿಗೆ ಹಲವು ಅಗತ್ಯ ಅವಶ್ಯಕತೆಗಳಿದೆ. ಜನರು ನೇರವಾಗಿ ತೊಡಗಿಸಿಕೊಂಡಾಗ ಮಾತ್ರ ಆವಿಷ್ಕಾರಗಳು ಜನಸಾಮಾನ್ಯರಿಗೆ ತಲುಪುತ್ತವೆ. ಉನ್ನತ ಶಿಕ್ಷಣದ ತಾಂತ್ರಿಕ ಸಂಸ್ಥೆಗಳು ಈ ತರಹದ ಪರಿಸರವನ್ನು ಸೃಷ್ಟಿಸಬೇಕಿದೆ. ಈ ನಿಟ್ಟಿನಲ್ಲಿ ಅಲ್ಲಿ ಸಮಾಜಶಾಸ್ತ್ರ, ವಿಜ್ಞಾನದ ಇತಿಹಾಸದಂತಹ ಶಿಕ್ಷಣ ವಿಭಾಗಗಳನ್ನು ರಚಿಸುವ ಅಗತ್ಯವಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.
ಜಯನಗರದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಸಭಾಂಗಣದಲ್ಲಿ ಭಾರತೀಯ ವಿಜ್ಞಾನ ಆಕಾಡೆಮಿ ಮತ್ತು ಐಐಟಿ ಮದ್ರಾಸ್ ಅಲುಮಿನಿ ಅಸೋಸಿಯೇಷನ್ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿರುವ 'ಎಂಪವರಿಂಗ್ ಇಂಡಿಯಾ' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತಾನಾಡಿದ ಅವರು, ಸಮುದಾಯಕ್ಕೆ ಸುಲಭವಾಗಿ ತಿಳಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬರೆಯುವ ಕೋರ್ಸ್ಅನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಇದರಿಂದ ಮಾತ್ರ ವೈಜ್ಞಾನಿಕ ವಿಚಾರಗಳು ಮತ್ತು ವಿಷಯಗಳು ಜನಸಾಮಾನ್ಯರಿಗೆ ತಿಳಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಅಕಾಡೆಮಿಯು ಜರ್ನಲ್‌ಗಳು, ಪುಸ್ತಕಗಳನ್ನು ಪ್ರಕಟಿಸುವಲ್ಲಿ ಸಕ್ರಿಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಬಂಧಿತ ನೀತಿಗಳ ಪೇಪರ್‌ಗಳನ್ನು ಸಹ ಪ್ರಕಟಿಸುತ್ತಿದೆ. ಈ ಪುಸ್ತಕವು ಎರಡರ ನಡುವಿನ ಸಮ್ಮಿಲನವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಲೈವ್ ಡಾಕ್ಯುಮೆಂಟ್ ಆಗಿ ಕೂಡ ಈ ಪುಸ್ತಕವನ್ನು ಪರಿಗಣಿಸಬಹುದಾಗಿದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಅಧ್ಯಕ್ಷ ಉಮೇಶ್ ವಾಗ್ಮಾರೆ ಹೇಳಿದರು.