ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್ ಅನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾಯಿಸಿದ ತಕ್ಷಣ ಸಂಬಂಧಪಟ್ಟ ನ್ಯಾಯಾಲಯದ ಗಮನಕ್ಕೆ ತರಬೇಕು. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆ ಮತ್ತು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ಅಗತ್ಯ ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರ ನ್ಯಾಯಪೀಠ, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ತನಿಖಾಧಿಕಾರಿಗಳು ಎಫ್‌ಐಆರ್ ವರ್ಗಾವಣೆ ಮತ್ತು ಆರೋಪಪಟ್ಟಿ ಸಲ್ಲಿಕೆ ಮಾಡುವ ಬಗ್ಗೆ ಸಂಬಂಧಿಸಿದ ಕೋರ್ಟ್‌ಗಳಿಗೆ ಮಾಹಿತಿ ನೀಡದ ಕುರಿತು ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ಸರ್ಕಾರಿ ಅಭಿಯೋಜಕರಾಗಲಿ ಮತ್ತು ತನಿಖಾಧಿಕಾರಿಯಾಗಲಿ ಎಫ್‌ಐಆರ್ ವರ್ಗಾವಣೆ ಮತ್ತು ಆರೋಪ ಪಟ್ಟಿ ಸಲ್ಲಿಕೆ ಬಗ್ಗೆ ನಿಗಾವಹಿಸಿಲ್ಲ. ಇದರಿಂದ ನ್ಯಾಯದಾನ ಸಫಲವಾಗಲಿಲ್ಲ. ಇನ್ನೂ ಎರಡೆರಡು ನ್ಯಾಯಾಲಯಗಳಲ್ಲಿ ವಿಚಾರಣಾ ಪ್ರಕ್ರಿಯೆ ನಡೆದಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯವು ಸರ್ಕಾರಿ ಅಭಿಯೋಜಕರು ಹಾಗೂ ತನಿಖಾಧಿಕಾರಿಯಿಂದ ಆರೋಪ ಪಟ್ಟಿ ಸಲ್ಲಿಕೆ ಖಾತರಿಪಡಿಕೊಳ್ಳಬೇಕು. ಎಫ್‌ಐಆರ್ ವರ್ಗಾವಣೆಯಾದ ಕೂಡಲೇ ಸಂಬಂಧಪಟ್ಟ ಕೋರ್ಟ್‌ನ ಗಮನಕ್ಕೆ ತರಬೇಕು. ಈ ಸಂಬಂಧ ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಅಭಿಯೋಜಕರಿಗೆ ಸೂಚಿಸಿ ಸರ್ಕಾರವು ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನಲೆ ಏನು? : ಅಪರಿಚಿತ ಶವ ಪತ್ತೆ ಸಂಬಂಧ 2021ರ ಆ.8ರಂದು ದಾಖಲಾದ ದೂರು ಸಂಬಂಧ ಕಲಬುರಗಿಯ ಮಹಾಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2021ರ ಸೆ.10ರಂದು ಆರೋಪಿ ಸುನೀಲ್ ಅನ್ನು ಕೊಲೆ ಆರೋಪದಡಿ ಬಂಧಿಸಿದ್ದರು. ನಂತರ ನಿಗದಿತ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ತಿಳಿಸಿ ಜಾಮೀನು ಕೋರಿ 2021ರ ಡಿ.17ರಂದು ಸುನೀಲ್‌ಗೆ ಅರ್ಜಿ ಸಲ್ಲಿಸಿದ್ದನು.