ಬೆಂಗಳೂರು:ಕೋಮುವಾದಿ ಬಿಜೆಪಿ, ಆರ್ಎಸ್ಎಸ್ ಧೋರಣೆ ಖಂಡಿಸಿದವರು, ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ. ಸಿದ್ಧಾಂತಗಳನ್ನು ಗಾಳಿಗೆ ತೂರಿದ ಅನರ್ಹರು, ಅಯೋಗ್ಯರನ್ನು ಸೋಲಿಸಲು ಇಲ್ಲಿನ ಮತದಾರರು ಮತ್ತೊಮ್ಮೆ ತೀರ್ಮಾನ ಮಾಡಬೇಕು ಎಂದು ಅನರ್ಹ ಶಾಸಕ ಬೈರತಿ ಬಸವರಾಜ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದಿದ್ದಾರೆ.
ಸಿದ್ಧಾಂತಗಳನ್ನು ಗಾಳಿಗೆ ತೂರಿದ ಅನರ್ಹ, ಅಯೋಗ್ಯರನ್ನು ಸೋಲಿಸಿ: ಉಮಾಶ್ರೀ ಕರೆ
ಕೋಮುವಾದಿ ಬಿಜೆಪಿ ಸೇರುವ ಮೂಲಕ ಮತದಾರರಿಗೆ ವಂಚಿಸಿ ಬಿಜೆಪಿ ಸೇರಿರುವ ಅಭ್ಯರ್ಥಿ ಬೈರತಿ ಬಸವರಾಜ ಅವರನ್ನು ಉಪಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಶಾಸಕಿ ಉಮಾಶ್ರೀ ಕುಟುಕಿದ್ದಾರೆ.
ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚಿಸಿ, ಮಾತನಾಡಿದ ಅವರು, ಜಾತ್ಯತೀತ ನಿಲುವು ಹೊಂದಿದ್ದ ಬಸವರಾಜ್ ಏಕಾಏಕಿ ಬಿಜೆಪಿಗೆ ಸೇರಿರುವುದು ಯಾಕೆ. ಸಿದ್ಧಾಂತಗಳ ಮೇಲೆ ನಂಬಿಕೆ ಇಲ್ಲದವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಮತದಾರರ ನಂಬಿಕೆ ಹುಸಿಗೊಳಿಸಿ, ಜನರಿಗೆ ಅಗೌರವ ತೋರಿಸುವ ಕೆಲಸವನ್ನು ಬಸವರಾಜ್ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಅನುದಾನ ಗಿಟ್ಟಿಸಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಿಸುವವನೇ ನಿಜವಾದ ಶಾಸಕ. ಇಂತಹ ಅಭಿವೃದ್ಧಿ ಕೆಲಸ ಮಾಡಿಸುವ ತಾಕತ್ತು ಬಸವರಾಜ್ಗೆ ಇಲ್ಲ ಎಂದು ಕಿಡಿಕಾರಿದ್ದಾರೆ.