ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ನ ಭದ್ರಕೋಟೆ. ಗೂಂಡಾಗಿರಿಯಿಂದ ಮತದಾರರ ಮನಸ್ಸು ಗೆಲ್ಲೋಕೆ ಆಗಲ್ಲ ಎಂದು ಶಾಸಕ ನಂದೀಶ್ ರೆಡ್ಡಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಅಭ್ಯರ್ಥಿ ವೈ.ನಾರಾಯಣಸ್ವಾಮಿ.
ಗೂಂಡಾಗಿರಿಯಿಂದ ಕೆ.ಆರ್.ಪುರಂ ಮತದಾರರನ್ನು ಗೆಲ್ಲೋಕಾಗಲ್ಲ: ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ
ಕಾಂಗ್ರೆಸ್ ಪಕ್ಷಕ್ಕೆ ಕೆ.ಆರ್.ಪುರಂ ಮತದಾರರಿಗೆ ವಂಚಿಸಿ ಪಕ್ಷ ತೊರೆದಿರುವ ಶಾಸಕರಿಗೆ ಸ್ವಾಭಿಮಾನಿ ಮತದಾರರು ಪಾಠ ಕಲಿಸುತ್ತಾರೆ. ಹಣದಿಂದ ಮತದಾರರ ಮನಗೆಲ್ಲೋಕೆ ಆಗಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ವೈ.ನಾರಾಯಣಸ್ವಾಮಿ ಹೇಳಿದರು.
ದೇವಸಂದ್ರ ವಾರ್ಡ್ನಲ್ಲಿನ ಮಸೀದಿ ರೋಡ್ನಲ್ಲಿ ಮನೆ ಮನೆಗೂ ತೆರಳಿ ಮತಯಾಚಿಸಿದ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಕೆ.ಆರ್.ಪುರ ಕ್ಷೇತ್ರದ ಜನರು ಕಾಂಗ್ರೆಸ್ಗೆ ಬೆಂಬಲಿಸಿದ್ದಾರೆ. ಬೈರತಿ ಬಸವರಾಜ್ ಎರಡು ಬಾರಿ ಕಾಂಗ್ರೆಸ್ ಹೆಸರಿನಲ್ಲಿ ಮತ ಪಡೆದಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಗೆ ಸೇರಿ, ಪಕ್ಷಕ್ಕೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ನಲ್ಲಿ ಟೇಬಲ್ ಹಾಕುವುದಕ್ಕೆ ಜನ ಇಲ್ಲ ಎಂದು ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ನಾರಾಯಣಸ್ವಾಮಿ, ಅವರ ಪರಿಸ್ಥಿತಿಯನ್ನು ಅವರೇ ಹೇಳಿಕೊಂಡಿದ್ದಾರೆ. ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದಾರೆ. ಹಣ ಹಾಗೂ ದುರಹಂಕಾರದಿಂದ ಯಾರನ್ನು ಗೆಲ್ಲಲು ಸಾಧ್ಯವಿಲ್ಲ. ಇನ್ನೂ 15 ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.