ಬೆಂಗಳೂರು: ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ಉಪಕ್ರಮಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಅಲ್ಲದೆ, ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯದಲ್ಲಿ ಕ್ರಾಂತಿಕಾರಿ ನೀತಿಗಳನ್ನು ಜಾರಿಗೊಳಿಸಲಾಗಿದ್ದು, ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್ ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಬಿಲ್ಡಿಂಗ್ದ ಫ್ಯೂಚರ್-ಇಂಟರ್ ಆಕ್ಟಿವ್ ಸೆಸ್‌ನ್ ಆನ್ ಎನಕರೇಜಿಂಗ್ ಡೊಮೆಸ್ಟಿಕ್ ಸ್ಕೇಲ್ ಅಪ್ ಆಫ್ ಇಂಡಿಯನ್ ಕನ್ಸ್ಟ್ರಕ್ಷನ್ ಎಕ್ಯೂಫ್‌ಮೆಂಟ್ ಎಕೋಸಿಸ್ಟಮ್ ವೆಬಿನಾರ್ನಲ್ಲಿ ಭಾಗವಹಿಸಿ ಮಾತನಾಡಿರು.
ʼಕೈಗಾರಿಕೆ ಮತ್ತು ಆರ್ಥಿಕಾಭಿವೃದ್ದಿಯತ್ತ ಕರ್ನಾಟಕ ರಾಜ್ಯದ ದೃಷ್ಟಿಯʼ ಬಗ್ಗೆ ಹಲವು ಮಾಹಿತಿಯನ್ನು ನೀಡಿದರು. ಕರ್ನಾಟಕ ರಾಜ್ಯವನ್ನು ಹೂಡಿಕೆ ಸ್ನೇಹೀ ರಾಜ್ಯವನ್ನಾಗಿಸುವತ್ತ ಸರ್ಕಾರ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಕರ್ನಾಟಕ ರಾಜ್ಯದ ಜಿಎಸ್‌ಡಿಪಿ [GSDP] 201 ಬಿಲಿಯನ್ ನಷ್ಟಿದೆ. ಅಲ್ಲದೆ, ರಾಜ್ಯ ರಫ್ತಿನ ಪ್ರಮಾಣ 100 ಬಿಲಿಯನ್ ನಷ್ಟಿದೆ ಎಂದರು.
ನೀತಿ ಆಯೋಗದ ಇಂಡಿಯಾ ಇನ್ನೋವೇಶನ್ ಇಂಡೆಕ್ಸ್ನಲ್ಲಿ ನಂ.1 ಸ್ಥಾನಲ್ಲಿದ್ದು, ದೇಶದಲ್ಲೇ ಹೆಚ್ಚಿನ ಪ್ರಮಾಣದ ಆರ್&ಡಿ ಕೇಂದ್ರಗಳನ್ನು ಹೊಂದಿದ್ದೇವೆ. ಚೆನ್ನೈ ಹಾಗೂ ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್ ಹಾಗೂ ಬೆಂಗಳೂರು ಮುಂಬಯಿ ಎಕನಾಮಿಕ್ ಕಾರಿಡಾರ್, ಹೀಗೆ ಎರಡು ಇಂಡಸ್ಟ್ರೀಯಲ್ ಕಾರಿಡಾರ್ ಹೊಂದಿರುವ ಏಕೈಕ ರಾಜ್ಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾಗಿರುವ ವಿದ್ಯುತ್ ಶಕ್ತಿ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು ಲಭ್ಯವಿವೆ. ಅಲ್ಲದೆ, ರಾಜ್ಯದಲ್ಲಿ 16-35 ವರ್ಷದ ಒಳಗಿನ 20 ಮಿಲಿಯನ್ ಯುವಜನರಿದ್ದಾರೆ. ಅವರಿಗೆ ಅಗತ್ಯವಿರುವ ಕೌಶಲ್ಯಾಭಿವೃದ್ದಿಯನ್ನು ನೀಡುವಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕಳೆದ ಕೆಲವು ತಿಂಗಳಿನಲ್ಲಿ ಕಾರ್ಮಿಕ ಕಾನೂನು, ಭೂಸುಧಾರಣಾ ನೀತಿಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದಿದ್ದೇವೆ. ಅಲ್ಲದೆ, ಹೊಸದಾಗಿ ಘೋಷಣೆ ಮಾಡಿರುವ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯಗಳ ಅಧಿನಿಯಮದಿಂದ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿದ್ದ ಹಲವಾರು ಅಡೆತಡೆಗಳನ್ನು ನಿವಾರಿಸಲಾಗಿದೆ. ಡಿಐಪಿಟಿ ನಿರ್ದೇಶನದಂತೆ ಇಲಾಖೆಯಲ್ಲಿ ಈಗಾಗಲೇ ಬ್ಯುಸಿನೆಸ್ ರಿಫಾರ್ಮ್ಸ್ ಆಕ್ಷನ್ ಪಾಯಿಂಟ್ಸ್ಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ರಾಜ್ಯದಲ್ಲಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳತ್ತ ಹೆಚ್ಚಿನ ಗಮನ ನೀಡಲಾಗಿದೆ. ಇವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.