ಬೆಂಗಳೂರು: ಕಳೆದ ಮೂರು ವರ್ಷದಲ್ಲಿ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ವಿವಿಧ ಕಾರಣದಿಂದ ಮುಚ್ಚಿವೆ. ಇದರಿಂದ 2086 ಜನ ನಿರುದ್ಯೋಗಿಗಳು ಆಗಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿವಿಧ ಕಾರಣಗಳಿಂದಾಗಿ ಈ ಕಾರ್ಖಾನೆಗಳು ಮುಚ್ಚಿವೆ. ಆದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಈಸ್ ಆಫ್ ಡೂಯಿಂಗ್ ನಲ್ಲಿಯೂ ಮುಂಚೂಣಿಯಲ್ಲಿದ್ದೇವೆ. ರೋಗಗ್ರಸ್ತವಾಗಿರುವ ಕೈಗಾರಿಕೆ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಅವುಗಳಿಗೆ ಉತ್ತೇಜನ ನೀಡಲಿದ್ದೇವೆ. ಸಾಕಷ್ಟು ಕಾರ್ಖಾನೆಗಳನ್ನು ಪುನಶ್ಚೇತನ ಮಾಡಲಾಗಿದೆ. ಮುಚ್ಚಿರುವ ಕಾರ್ಖಾನೆಗಳಿಗೆ ಸೇಲ್ ಡೀಡ್ ಮಾಡಿಕೊಡಲಾಗಿದೆ ಎಂದು ವಿವರ ನೀಡಿದರು.
ಕೈಗಾರಿಕೆ ಸ್ಥಾಪಿಸದ ಕೆಐಎಡಿಬಿ ಜಾಗ ವಾಪಸ್: ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆ ಪಡೆದು ಯೋಜನೆ ಅನುಷ್ಠಾನಕ್ಕೆ ತರದ 9572.63 ಎಕರೆ ಜಾಗದ 1117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 9.5 ಸಾವಿರ ಕೆರೆ ಭೂಮಿಯಲ್ಲಿ 7 ಸಾವಿರ ಎಕರೆಯನ್ನು ಉಕ್ಕು ಉದ್ದಿಮೆಗೆ ನೀಡಲಾಗಿದೆ. ಆದರೆ, ಅವರಿಗೆ ಕಚ್ಚಾವಸ್ತು ಪೂರೈಕೆ ಮಾಡಲಾಗದ ಕಾರಣಕ್ಕೆ ಅವರು ಅನುಷ್ಠಾನಕ್ಕೆ ತಂದಿಲ್ಲ. ಆದರೆ, ಉಳಿದ ಕಡೆ ನೋಟಿಸ್ ನೀಡಿ ಜಾಗವನ್ನು ಕೆಐಎಡಿಬಿ ವಶಕ್ಕೆ ಮರಳಿ ಪಡೆದುಕೊಳ್ಳಲಾಗುತ್ತದೆ ಎಂದರು.