ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಇಲಾಖೆ ಕೈಗಾರಿಕಾ ನೀತಿ 2020-25 ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಡಿ.ದರ್ಜೆ ನೌಕರರಿಗೆ 100% ಕೆಲಸದ ಮೀಸಲಾತಿ ಹಾಗೂ ಸಿ ದರ್ಜೆ ನೌಕರರಿಗೆ 75% ಕನ್ನಡಿಗರಿಗೆ ಮೀಸಲಾತಿ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಕೈಗಾರಿಕಾ ನೀತಿ ಈಗಾಗಲೇ ಬಿಡುಗಡೆ ಆಗಿದೆ. ಈ ಕಾರ್ಯಕ್ರಮ ಉದ್ಯಮಗಳಲ್ಲಿ ಹೊಸ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜನೆ ಮಾಡಲಾಗಿದೆ. ಕರ್ನಾಟಕ ಸರ್ಕಾರ 5 ವರ್ಷಕ್ಕೊಮ್ಮೆ ಕೈಗಾರಿಕಾ ನೀತಿ ಹೊರಡಿಸುತ್ತದೆ. 2014 ರಲ್ಲಿ ಹಿಂದಿನ ಕೈಗಾರಿಕಾ ನೀತಿ ಜಾತಿಗೆ ಬಂದಿತ್ತು. ಅಂದಿನಿಂದ ಹಲವಾರು ಬದಲಾವಣೆಗಳು ಆಗಿವೆ. ಈಗಿನ ಹೊಸ ಕೈಗಾರಿಕಾ ನೀತಿಯ ಮುಖ್ಯ ಉದ್ದೇಶವೆಂದರೆ ಸಂಶೋಧನೆಗಳಿಂದ ದೇಶ ಹಾಗೂ ವಿಶ್ವದಲ್ಲಿ ಉತ್ತಮ ಸ್ಥಾನ ಗಳಿಸಬೇಕು.
ಬೆಂಗಳೂರು ಅಷ್ಟೇ ಅಲ್ಲದೆ 2ನೇ ಹಾಗೂ 3ನೇ ದರ್ಜೆ ನಗರಗಳು ಅಭಿವೃದ್ಧಿ ಆಗಬೇಕು. ಬೆಂಗಳೂರಿನಲ್ಲಿ ಜಾಗ ದುಬಾರಿ. ಹೀಗಾಗಿ ಇತರೆ ನಗರಗಳನ್ನ ಅಭಿವೃದ್ಧಿಪಡಿಸಿ ಕೈಗಾರಿಕೆಗಳನ್ನು ಝೋನ್ನಂತೆ ಬೇರೆ ನಗರಗಳಲ್ಲಿ ಸ್ಥಾಪನೆ ಆಗಬೇಕು. ಕ್ಲಸ್ಟರ್ ಮೂಲಕ ವಿವಿಧ ನಗರಗಲ್ಲಿ ವಿವಿಧ ಕೈಗಾರಿಕೆಗಳು ಪ್ರಾರಂಭ ಆಗಲಿವೆ. ಸರ್ಕಾರ ಇದಕ್ಕೆ ಬೇಕಾದ ಎಲ್ಲಾ ಸಹಾಯ ಮಾಡಲಿದೆ. ಏರೋಸ್ಪೇಸ್, ರಕ್ಷಣಾ ಉಪಕರಣಗಳು ಸೇರಿದಂತೆ ಎಲ್ಲಾ ಆಧುನಿಕ ತಂತ್ರಜ್ಞಾನ ಕಾರ್ಖಾನೆಗಳು ಸ್ಥಾಪನೆ ಆಗಬೇಕು. ಜಲ ಸಂರಕ್ಷಣೆ ಕ್ರಮಗಳನ್ನ ಕೈಗಾರಿಕೆಗಳು ಕೈಗೊಂಡ ಸಂದರ್ಭದಲ್ಲಿ ಉತ್ತೇಜನ ಹಣ ನೀಡುವ ಅವಕಾಶ ನೀತಿಯಲ್ಲಿದೆ ಎಂದು ಸಚಿವರು ತಿಳಿಸಿದರು.