ಕರ್ನಾಟಕ

karnataka

By

Published : Jun 19, 2023, 3:33 PM IST

Updated : Jun 19, 2023, 8:01 PM IST

ETV Bharat / state

Indira Canteen: ಇಂದಿರಾ ಕ್ಯಾಂಟೀನ್ ಮೆನುಗೆ 4 ಹೊಸ ಆಹಾರ ಸೇರ್ಪಡೆ; ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯ

ಬಿಬಿಎಂಪಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಮೆನುವಿಗೆ ಹೊಸ ಆಹಾರ ಸೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಬ್ರೆಡ್-ಜ್ಯಾಮ್, ಮಂಗಳೂರು ಬನ್, ಮುದ್ದೆ-ಸೊಪ್ಪಿನ ಸಾರು ಹಾಗೂ ಪಾಯಸ ಸಿಗಲಿದೆ.

Etv Bharatbbmp-officials-added-four-new-dishes-to-indira-canteen-menu
ಇಂದಿರಾ ಕ್ಯಾಂಟೀನ್​ಗೆ ಪುನರ್​ ವೈಭವ ತರಲು ಮುಂದಾದ ಸರ್ಕಾರ: ನಾಲ್ಕು ಹೊಸ ಮೆನು ಸೇರ್ಪಡೆಗೆ ಸಿದ್ಧತೆ

ಬೆಂಗಳೂರು: ಜನರಿಗೆ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಪೂರೈಸಲು ನಿರ್ಧರಿಸಿ ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್​ಗೆ ಮತ್ತೆ ಹಳೆಯ ವೈಭವ ತರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಚಿವರನ್ನು ಮತ್ತು ಪಕ್ಷದ ನಾಯಕರನ್ನು ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡುವಂತೆ ತಿಳಿಸಿ, ಗುಣಮಟ್ಟ ವೃದ್ಧಿಗೆ ಸಲಹೆ, ಸೂಚನೆ ಸ್ವೀಕರಿಸಿದ್ದರು. ಇಲ್ಲಿನ ಆಹಾರಕ್ಕೆ ಇನ್ನಷ್ಟು ಹೊಸ ಸೇರ್ಪಡೆ ಮಾಡಲು ಸಲಹೆ ನೀಡಿದ್ದರು.

ಸಿಎಂ ಸೂಚನೆ ಆಧರಿಸಿ ಬಿಬಿಎಂಪಿ ಅಧಿಕಾರಿಗಳು ಹೊಸದಾಗಿ ಇಂದಿರಾ ಕ್ಯಾಂಟೀನ್ ಮೆನುವಿಗೆ ನಾಲ್ಕು ಹೊಸ ಆಹಾರವನ್ನು ಸೇರಿಸಿದ್ದಾರೆ. ಇದರಿಂದ ಮುಂದಿನ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟೀನ್​ನಲ್ಲಿ ಗ್ರಾಹಕರು ಕಡಿಮೆ ಬೆಲೆಗೆ ಬ್ರೆಡ್-ಜ್ಯಾಮ್, ಮಂಗಳೂರು ಬನ್, ಮುದ್ದೆ-ಸೊಪ್ಪಿನ ಸಾರು ಹಾಗೂ ಪಾಯಸ ಪಡೆಯಲಿದ್ದಾರೆ. ಕ್ಯಾಂಟೀನ್​ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.

ಬಹುತೇಕ ಈ ಆಹಾರ ನೀಡಿಕೆ ಅತ್ಯಂತ ಶೀಘ್ರವೇ ಆರಂಭವಾಗಲಿದೆ. ಯಾರಿಗೆ ಇದರ ಸಿದ್ಧಪಡಿಸುವ ಗುತ್ತಿಗೆ ನೀಡಬೇಕು, ಯಾವತ್ತಿನಿಂದ ಆಹಾರ ನೀಡಬೇಕು ಎಂಬ ವಿಚಾರವಾಗಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಇದುವರೆಗೂ ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗ್ಗೆ ತಿಂಡಿಗೆ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಪಲಾವ್, ಚಿತ್ರಾನ್ನ ಸಿಗುತ್ತಿತ್ತು. ಮಧ್ಯಾಹ್ನದ ಊಟಕ್ಕೆ ಹಿಂದೆಯೂ ಅನ್ನ ಸಾಂಬಾರ್, ಮುದ್ದೆ ಕೊಡಲಾಗುತ್ತಿತ್ತು. ಮುದ್ದೆಗೆ ತರಕಾರಿ ಸಾಂಬಾರ್ ನೀಡಲಾಗುತ್ತಿತ್ತು. ಈ ವರ್ಷದಿಂದ ಮಧ್ಯಾಹ್ನದ ಊಟಕ್ಕೆ ಮುದ್ದೆ, ಸೊಪ್ಪಿನ ಸಾರು ನೀಡಲು ನಿರ್ಧರಿಸಲಾಗಿದೆ.

ದಿನಬಿಟ್ಟು ದಿನ ಮುದ್ದೆ, ಸೊಪ್ಪಿನ ಸಾರು ನೀಡಲು ನಿರ್ಧರಿಸಲಾಗಿದೆ. ಮುದ್ದೆ ಇಲ್ಲದ ದಿನ ಚಪಾತಿ ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿ ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ನೀಡಿದ್ದಾರೆ. ಅಲ್ಲಿಂದ ಒಪ್ಪಿಗೆ ಸಿಗುವುದು ಮಾತ್ರ ಬಾಕಿ ಇದೆ.
ಇಂದಿರಾ ಕ್ಯಾಂಟೀನ್​ಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಪಾಯಸ ಸೇರಿಸುವ ತೀರ್ಮಾನ ಸಹ ಕೈಗೊಳ್ಳಲಾಗಿದೆ. ವಿವಿಧ ಧಾನ್ಯಗಳ ಪಾಯಸ ಸಿದ್ಧಪಡಿಸುವ ಕಾರ್ಯ ಆಗಲಿದೆ. ಹೆಸರು ಬೇಳೆ, ಶ್ಯಾವಿಗೆ, ಗೋಧಿ, ಅಕ್ಕಿ ಅಥವಾ ಸಬ್ಬಕ್ಕಿಯಿಂದ ಪಾಯಸ ತಯಾರಿಸುವ ಕಾರ್ಯ ಆಗಲಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೆ 2013 ರಿಂದ 18ರ ಅಧಿಕಾರವಧಿಯಲ್ಲಿ ನಗರದ ಎಲ್ಲಾ 198 ವಾರ್ಡ್‌ಗಳಿಗೂ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಗುರಿ ಹೊಂದಲಾಗಿತ್ತು. ಆದರೆ ಇದು ಪೂರ್ಣಗೊಳ್ಳುವ ಮುನ್ನವೇ ಕಾಂಗ್ರೆಸ್ ಸರ್ಕಾರ ಪಥನಗೊಂಡು ಬಹುಮತದ ಸರ್ಕಾರ ಬರದ ಹಿನ್ನೆಲೆ 2018 ರಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿ ಸರ್ಕಾರ ನಡೆಸಿತ್ತು ಕಾಂಗ್ರೆಸ್. ಅಲ್ಲಿಯವರೆಗೂ ಎಲ್ಲವೂ ಸರಿಯಾಗಿತ್ತು ಆದರೆ ಬಿಜೆಪಿ ಸರ್ಕಾರ ರಚನೆಯಾದ ಬಳಿಕ 2019 ರಿಂದ 2023ರ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್​ಗಳು ಮುಚ್ಚಿದ್ದವು. ಮೊಬೈಲ್ ಕ್ಯಾಂಟೀನ್​ಗಳು ಸಹ ಸ್ಥಗಿತಗೊಂಡಿದ್ದವು.

ರಾಜ್ಯದಲ್ಲಿ ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮುಚ್ಚಿರುವ ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯುವ ಜೊತೆಗೆ ಇನ್ನಷ್ಟು ಕ್ಯಾಂಟೀನ್​ಗಳನ್ನ ಆರಂಭಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದೇ ಪ್ರಕಾರ ಆ ಕಾರ್ಯದಲ್ಲಿ ಈಗ ನಿರತವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 185 ಇಂದಿರಾ ಕ್ಯಾಂಟೀನ್‌ಗಳು ಇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ 10 ಮೊಬೈಲ್ ಕ್ಯಾಂಟೀನ್‌ಗಳ ಮುಚ್ಚಿದ್ದವು.

ಹಾಲಿ ಕ್ಯಾಂಟೀನ್‌ಗಳ ಪುನಾರಂಭ ಜೊತೆಗೆ 243 ವಾರ್ಡ್‌ಗಳಿಗೂ ಕ್ಯಾಂಟೀನ್ ವಿಸ್ತರಣೆಗೆ ಸಿದ್ದರಾಮಯ್ಯ ಸರ್ಕಾರ ಸಿದ್ಧತೆ ನಡೆಸಿದೆ. ಅಲ್ಲದೇ ಆಹಾರದ ಪ್ರಮಾಣ (ಕ್ವಾಂಟಿಟಿ), ಗುಣಮಟ್ಟ ಹೆಚ್ಚಿಸಲಿದೆ. ಇದರಿಂದ ಬೆಲೆ ಸಹ 5-10 ರೂಪಾಯಿ ಹೆಚ್ಚಾಗಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಸದ್ಯ ಇನ್ನೂ 50 ಇಂದಿರಾ ಕ್ಯಾಂಟೀನ್ ಹೆಚ್ಚಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಕಾರ್ಯಕ್ರಮ ಯಶಸ್ಸಿಗೆ ಕೇಂದ್ರ ಅಡ್ಡಗಾಲು: ಸಚಿವ ಸಂತೋಷ ಲಾಡ್ ಅಸಮಾಧಾನ

Last Updated : Jun 19, 2023, 8:01 PM IST

ABOUT THE AUTHOR

...view details