ಬೆಂಗಳೂರು: ಎಲ್ಲ ನಮೂನೆಯ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿ ಮುಂದಿನ 3 ವರ್ಷಗಳಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡಬೇಕು ಎಂಬ ಗುರಿಯೊಂದಿಗೆ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಕೇಂದ್ರ ಸಚಿವ ಸದಾನಂದ ಗೌಡ ಭಾಷಣ ಬೆಂಗಳೂರಿನ ಆರ್.ಆರ್ ಇನ್ಸ್ಟಿಟ್ಯೂಟ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವ, ಭಾರತವು ಜನರಿಕ್ ಮೆಡಿಸಿನ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೂರನೇ ಸ್ಥಾನವನ್ನು ಹೊಂದಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕೂಡಾ ಜಗತ್ತಿನ 120 ದೇಶಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್, ಪ್ಯಾರಾಸಟಮಾಲ್ ಮುಂತಾದ ಮಾತ್ರೆಗಳನ್ನು ಪೂರೈಸಿದೆವು. ಆದರೆ ಬಹುತೇಕ ಔಷಧ ಉತ್ಪಾದನೆಗೆ ಬೇಕಾಗುವ ಮೂಲ ರಾಸಾಯನಿಕಗಳಿಗಾಗಿ ನಾವು ಚೀನಾ ಮತ್ತಿತರ ದೇಶಗಳ ಮೇಲೆ ಅವಲಂಬಿತವಾಗಿದ್ದೇವೆ ಎಂದರು.
ಇದರಲ್ಲಿ ಸ್ವಾವಲಂಬನೆ ಸಾಧಿಸಲು ದೇಶದ ಬೇರೆ ಬೇರೆ ಭಾಗಗಳಲ್ಲಿ ಮೂರು ಬಲ್ಕ್ ಡ್ರಗ್ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಲಾಗುತ್ತಿದೆ. ಅದೇ ರೀತಿ ಶೇಕಡಾ 85ರಷ್ಟು ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿಯೇ ಇವನ್ನು ತಯಾರಿಸುವ ಉದ್ದೇಶದಿಂದ ನಾಲ್ಕು ಮೆಡಿಕಲ್ ಡಿವೈಸ್ ಪಾರ್ಕುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವೆಲ್ಲ ಪೂರ್ಣಪ್ರಮಾಣದಲ್ಲಿ ಫಲ ನೀಡಲು ಇನ್ನೂ ಮೂರು ವರ್ಷ ಬೇಕು ಎಂದು ಹೇಳಿದರು.
ಇದುವರೆಗೆ ದೇಶದ 734 ಜಿಲ್ಲೆಗಳಲ್ಲಿ 7500 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗೆಯೇ ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಬಡವರ ಅನುಕೂಲಕ್ಕಾಗಿ ಜನೌಷಧಿ ಕೆಂದ್ರಗಳು ಇರಬೇಕು ಎಂಬುದು ಕೇಂದ್ರ ಸರ್ಕಾರದ ಇಚ್ಛೆಯಾಗಿದೆ. ಕರ್ನಾಟಕದಲ್ಲೂ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಸ್ಥಳಾವಕಾಶ ಕಲ್ಪಿಸಬೇಕು ಎಂದು ಕೋರಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ ಎಂದರು.