ಬೆಂಗಳೂರು: ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಎಲ್ಲೆಲ್ಲೂ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಿಸಲು ಬಗೆ ಬಗೆಯ ಕೇಕ್‌ಗಳು ರೆಡಿಯಾಗುತ್ತವೆ. ಈ ಬಾರಿ ಕೋವಿಡ್ ನಡುವೆಯೂ ನಗರದಲ್ಲಿ ವಿಭಿನ್ನ ಹಾಗೂ ಪ್ರಸ್ತುತ ವಿದ್ಯಮಾನದ ಥೀಮ್‌ನೊಂದಿಗೆ ಕೇಕ್ ಶೋ ಆಯೋಜಿಸಲಾಗಿದೆ.
ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ನಲ್ಲಿ ಈ ಬಾರಿ ಮಕ್ಕಳಿಗಾಗಿ ವಿಶೇಷವಾದ ಕೇಕ್ ಶೋ ಆಯೋಜಿಸಲಾಗಿದೆ. ಈ ಕೇಕ್ ಶೋನ ಥೀಮ್ ಕೂಡ ವಿಶಿಷ್ಟವಾಗಿದ್ದು, ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಕಾರ್ಟೂನ್ ಥೀಮ್ ಇರಿಸಲಾಗಿದೆ.
ಭಾರತದ ಅತೀ ದೊಡ್ಡ ಕೇಕ್ ಶೋ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜಿಸಿರುವ ಗ್ರೌಂಡ್ನ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಲಯನ್ ಕಿಂಗ್ ಚಿತ್ರದ ಒಂದು ದೃಶ್ಯವನ್ನಾಧಾರಿಸಿ ತಯಾರಿಸಿದ ಕೇಕ್, ಅದರ ಪಕ್ಕದಲ್ಲಿ ಇಟಲಿಯ ವಾಲುವ ಪೀಸ್ ಗೋಪುರ, ಕೊರೊನಾ ವೈರಸ್ ಮಾಸ್ಕ್ ಹಾಕಿರುವುದು, ನಾಟ್ಯ ದೇವರು ನಟರಾಜ್, ಮದುವೆಯ ಕೇಕ್, ಚಿನ್ನದ ಡ್ರ್ಯಾಗನ್, ಟಾಮ್ ಅಂಡ್ ಜೆರಿ, ಗಣಪತಿ ದೇವರು, ಪ್ಯಾರಿಸ್‌ನ ಐಫೆಲ್ ಟವರ್. ಹೀಗೆ ಹತ್ತು ಹಲವು ಆಕರ್ಷಕ ಕೇಕ್‌ಗಳು ನಮ್ಮನ್ನು ಕೈ ಬೀಸಿ ಕರೆಯುತ್ತವೆ.
ಡಿಸೆಂಬರ್ 17 ರಿಂದ ಜನವರಿ 3ರ ವರೆಗೆ ನಡೆಯುತ್ತಿರುವ ಭಾರತದ ಅತೀ ದೊಡ್ಡ ಕೇಕ್ ಉತ್ಸವ ಇದಾಗಿದೆ. ಈ ಪ್ರದರ್ಶನದಲ್ಲಿ ಶುಗರ್ ಸ್ಕಲ್ಪ್ಟ್‌ನ ಸುಮಾರು 60 ಕ್ಕೂ ಹೆಚ್ಚು ನಳಪಾಕ ಪ್ರವೀಣರು ವಿವಿಧ ವಿನ್ಯಾಸಗಳ ಕೇಕ್‌ಗಳನ್ನ ತಯಾರಿಸಿದ್ದಾರೆ. ಈ ಬಾರಿಯ 46ನೇ ವರ್ಷದ ಈ ಕೇಕ್ ಶೋನಲ್ಲಿ ಸಿಂಹರಾಜನ ಬಂಡೆ, ನಟರಾಜ, ವಾಲುವ ಪೀಸ್ ಗೋಪುರ ಮುಖ್ಯ ಆಕರ್ಷಣೆಯಾಗಿದೆ. ಸುಮಾರು 9 ಅಡಿ ಅಗಲ ಹಾಗೂ 12 ಅಡಿ ಉದ್ದವಿರುವ ಈ ಕೇಕ್ ಅನ್ನು 70 ದಿನಗಳಲ್ಲಿ 6 ಜನರ ತಂಡ ವಿನ್ಯಾಸ ಮಾಡಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಯೇಸುವಿನ ಜನನ ಹಾಗೂ ಕೊರೊನಾ ವೈರಸ್‌ಗೆ ಮಾಸ್ಕ್ ಹಾಕಿರುವ ಕೇಕ್ ಈ ಬಾರಿಯ ಮತ್ತೊಂದು ಆಕರ್ಷಣೆಯಾಗಿದೆ.
ನಗರದ ಮೂಲೆ ಮೂಲೆಗಳಿಂದ ಜನರು ಕೇಕ್ ಶೋನ ಅಂದವನ್ನು ಕಣ್ತುಂಬ್ಬಿಕೊಳ್ಳಲು ಆಗಮಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆ, ಒಂದು ಬಾರಿಗೆ ಕೇವಲ 200 ಜನರಿಗೆ ಮಾತ್ರ ಅವಕಾಶವಿದೆ. ಕೇಕ್ ಶೋ ಜೊತೆ ಇತರ ಮಾರಾಟ ಮಳಿಗೆಗಳಿಗೂ ಇದ್ದು, ಶೇ. 50 ರಷ್ಟು ಸ್ಟಾಲ್‌ಗಳನ್ನು ಇರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ ಕೇಕ್ ಶೋ ವೇಳೆ ಸುಮಾರು 150 ಮಾರಾಟ ಮಳಿಗಳು ಇರುತ್ತಿತ್ತು. ಈ ಬಾರಿ ಕೇವಲ 60 ರಿಂದ 65 ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೇಕ್ ಶೋ ಆಯೋಜಿಸಿರುವ ಮೈದಾನದ ಮುಖ್ಯ ದ್ವಾರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬರನ್ನೂ ಥರ್ಮಲ್ ಚೆಕ್ ಮಾಡಿ ಒಳಗೆ ಬಿಡಲಾಗುತ್ತಿದೆ. ಕೋವಿಡ್‌ನಿಂದಾಗಿ ಜನ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಪ್ರವೇಶ ದರವನ್ನು ಕೊಂಚ ಕಡಿಮೆ ಮಾಡಲಾಗಿದ್ದು, 90 ರೂಪಾಯಿ ನಿಗದಿಪಡಿಸಲಾಗಿದೆ.