ಚಂದ್ರಯಾನ - 3 ನೌಕಾ ಉಡಾವಣೆಯ ಬಗ್ಗೆ ಬಾಹ್ಯಾಕಾಶ ವಿಜ್ಞಾನಿ ಗುರುಪ್ರಸಾದ್ ಅವರು ಮಾತನಾಡಿದ್ದಾರೆ ಬೆಂಗಳೂರು :ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ನ ಬಹು ಮಹತ್ವಾಕಾಂಕ್ಷೆಯ ಚಂದ್ರಯಾನ - 3 ನೌಕಾ ಉಡಾವಣೆ ಯಶಸ್ವಿಯಾಗಿದೆ. ಲ್ಯಾಂಡರ್, ರೋವರ್ ಯಂತ್ರ ಒಳಗೊಂಡ ಚಂದ್ರಯಾನ -3 ನೌಕೆ GSLV-MK3 ರಾಕೆಟ್ ಮೂಲಕ ಇಂದು ಮಧ್ಯಾಹ್ನ 2:35ಕ್ಕೆ ಸರಿಯಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಚಂದ್ರನತ್ತ ಪಯಣಿಸಿದೆ.
ಚಂದ್ರಯಾನದ ವೀಕ್ಷಣೆಗೆ ಅವಕಾಶ: ವಿಶ್ವದಾದ್ಯಂತ ಸಹಸ್ರಾರು ಜನರು ಬೆರಗುಗಣ್ಣಿನಿಂದ ಭಾರತದ ಚಂದ್ರಯಾನವನ್ನ ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಹ ಜವಾಹರಲಾಲ್ ನೆಹರು ತಾರಾಲಯದಲ್ಲಿ ಚಂದ್ರಯಾನದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾರತದ ಹೆಮ್ಮೆಯ ಚಂದ್ರಯಾನದ ಆರಂಭವನ್ನ ಕಣ್ತುಂಬಿಕೊಂಡರು. ಬಾಹ್ಯಾಕಾಶ ವಿಭಾಗದಲ್ಲಿ ಭಾರತದ ಸಾಧನೆ, ಚಂದ್ರಯಾನ 2ರಲ್ಲಿ ಆದ ವೈಫಲ್ಯ, ಲ್ಯಾಂಡರ್ ಹಾಗೂ ರೋವರ್ ಮಹತ್ವ ಮತ್ತು ಭಾರತದ ಚಂದ್ರಯಾನ - 3ರ ನಾನಾ ಹಂತಗಳ ಜೊತೆಗೆ ಚಂದ್ರಯಾನ -3ರ ಕ್ಷಣಗಳನ್ನ ಬಾಹ್ಯಾಕಾಶ ವಿಜ್ಞಾನಿ ಗುರುಪ್ರಸಾದ್ ನೆರೆದಿದ್ದವರಿಗೆ ಸರಳವಾಗಿ ವಿವರಿಸಿದರು.
2019 ರಲ್ಲಿ ಭಾರತದ ಚಂದ್ರಯಾನ - 2 ವಿಫಲವಾಗಿತ್ತು. ಆರಂಭಿಕ ಹಂತದಲ್ಲಿ ಸರಿಯಾಗಿಯೇ ಇದ್ದ ಚಂದ್ರಯಾನ 2 ಚಂದ್ರನ ಮೇಲ್ಮೈ ಮೇಲೆ ರೋವರ್ ಇಳಿಯುವ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಬಳಿಕ ನಿಯಂತ್ರಣ ಕೇಂದ್ರದ ಜತೆ ಸಂಪರ್ಕ ಕಡಿದುಕೊಂಡಿದ್ದ ಲ್ಯಾಂಡರ್ನಿಂದ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ.
ಬಾಹ್ಯಾಕಾಶ ವಿಜ್ಞಾನಿ ಗುರುಪ್ರಸಾದ್ ಮೊದಲ ಹಂತ ಬಹಳ ಅಚ್ಚುಕಟ್ಟಾಗಿ ಮುಗಿದಿದೆ: ''ಇವತ್ತು ಚಂದ್ರಯಾನ 3 ನೌಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಹಳ ಯಶಸ್ವಿಯಾಗಿ ಉಡಾವಣೆಯಾಗಿದ್ದನ್ನು ನೋಡಿದ್ವಿ. ಇವತ್ತು ನೌಕೆ ನಿಗದಿಯಾದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಾ ಇದೆ. ಇದು ಇಡೀ ಭಾರತಕ್ಕೆ ಹರ್ಷ ತರುವಂತಹ ವಿಚಾರ. ಭಾರತದ ಈ ಸಾಧನೆಯನ್ನು ಇಡೀ ಪ್ರಪಂಚವೇ ಗುರುತಿಸಿದೆ. ಇವತ್ತಿನ ಸಾಧನೆಯೂ ಮತ್ತಷ್ಟು ಕೀರ್ತಿಯನ್ನು ತಂದುಕೊಡುತ್ತದೆ ಅನ್ನಿಸುತ್ತೆ.ಇಸ್ರೋ ಸಂಸ್ಥೆಗೆ ನಾವೆಲ್ಲರು ಸೇರಿ ಶುಭಾಶಯಗಳನ್ನು ಹೇಳೋಣ. ಕೋಟ್ಯಂತರ ಜನ ಹಾಗೂ ವಿದ್ಯಾರ್ಥಿಗಳ ಆಶಯವಾಗಿತ್ತು. ಇಸ್ರೋ ಸಂಸ್ಥೆ ಸೋಮನಾಥ್ ಅವರ ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ನಿರ್ವಹಿಸಿದೆ. ಎಲ್ವಿಎಂನ್ 6ನೇ ರಾಕೆಟ್ ಉಡಾವಣೆ ಇದಾಗಿದೆ. ನಿಗದಿತ ಕಕ್ಷೆಗೆ ನೌಕೆ ಹೋಗಿದೆ. ರಾಕೆಟ್ನಿಂದ ಬೇರ್ಪಟ್ಟು ಭೂಮಿಯನ್ನ ಸುತ್ತುತ್ತಿದೆ. ಅಲ್ಲಿಗೆ ಚಂದ್ರಯಾನ 3ರ ಮೊದಲ ಹಂತ ಬಹಳ ಅಚ್ಚುಕಟ್ಟಾಗಿ ಮುಗಿದಿದೆ. ಅದರ ಉದ್ದೇಶವನ್ನು ಈಡೇರಿಸಲಿ ಎಂದು ವಿಜ್ಞಾನಿಗಳಿಗೆ ಶುಭಾಶಯ'' ಎಂದು ಬಾಹ್ಯಾಕಾಶ ವಿಜ್ಞಾನಿ ಗುರುಪ್ರಸಾದ್ ತಿಳಿಸಿದರು.
'ಜವಾಹರಲಾಲ್ ನೆಹರು ತಾರಾಲಯದಲ್ಲಿ ಚಂದ್ರಯಾನದ ನೇರ ದರ್ಶನ ಇತ್ತು. ಇವತ್ತು ನಾವಿಲ್ಲಿ ಬಂದಿದ್ದಕ್ಕೆ ತುಂಬಾ ಸಂತೋಷವಾಯಿತು. ಇಲ್ಲಿನ ಸರ್ ನಮಗೆ ಉಡಾವಣೆಯ ಎಲ್ಲ ಮಾಹಿತಿಯನ್ನು ನೀಡಿದ್ರು. ನಾವು ಫಿಸಿಕ್ಸ್ ಸ್ಟುಡೆಂಟ್ಸ್ ಆದ್ದರಿಂದ ಇವೆಲ್ಲವನ್ನು ಕಲಿತುಕೊಂಡೆವು' ಅಂತಾರೆ ವಿದ್ಯಾರ್ಥಿನಿ ಸಿರಿಶಾ.
ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಹೇಳಬೇಕು: 'ಭಾರತ ಇಷ್ಟೊಂದು ಮುಂದುವರೆದಿದೆ ಎಂಬುದನ್ನು ಹೇಳಿಕೊಳ್ಳಲು ತುಂಬಾ ಹೆಮ್ಮೆ ಅನಿಸುತ್ತೆ. ಇಡೀ ಪ್ರಪಂಚದಲ್ಲಿ ಭಾರತ ನಾಲ್ಕನೇ ರಾಷ್ಟ್ರ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ. ಪ್ರತಿಯೊಬ್ಬ ಭಾರತೀಯರು ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಹೇಳಬೇಕು' ಅಂತಾರೇ ವಿದ್ಯಾರ್ಥಿನಿ ಶಾಯಿಸ್ತಾ.
ಇದನ್ನೂ ಓದಿ:Chandrayana 3: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ... ಮಹಾತ್ವಾಂಕ್ಷೆ ಯೋಜನೆಗೆ ವಿದ್ಯಾರ್ಥಿಗಳಿಂದ ಶುಭಾಶಯ