ಕೊರೊನಾ ಸೋಂಕಿತರ ಚಿಕಿತ್ಸೆಗೆ ಸಿದ್ದವಾಗುತ್ತಿವೆ ರೈಲು ಬೋಗಿಗಳು: ಸ್ಲೀಪರ್ ಕೋಚ್ಗಳೇ ಐಸೋಲೇಷನ್ ವಾರ್ಡ್ಗಳು...!
ರೈಲ್ವೆ ಬೋಗಿಗಳನ್ನು ಅಗತ್ಯ ಮೂಲಸೌಕರ್ಯದೊಂದಿಗೆ ವೈದ್ಯಕೀಯ ಮಾರ್ಗಸೂಚಿಯಂತೆ ಪರಿವರ್ತಿಸಲಾಗುತ್ತದೆ, ಮೊಬೈಲ್, ಲ್ಯಾಪ್ ಟಾಪ್‌ಚಾರ್ಜರ್, ಸೊಳ್ಳೆಪರದೆಯನ್ನು ಬೋಗಿಗಳು ಒಳಗೊಳ್ಳಲಿದ್ದು, ಪ್ರತಿ ಬೋಗಿಯಲ್ಲಿ 8 ಬರ್ತ್ ಕ್ಯಾಬಿನ್ಗಳನ್ನು ಐಸೋಲೇಷನ್ ವಾರ್ಡ್ ಆಗಿ ಬಳಕೆ ಮಾಡಲಾಗುತ್ತದೆ.
ಬೆಂಗಳೂರು: ಕೊರೊನಾ ಚಿಕಿತ್ಸೆಗೆ ಐಸೋಲೇಷನ್ ವಾರ್ಡ್ಗಳ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಜೊತೆ ರೈಲ್ವೆ ಇಲಾಖೆ ಕೈಜೋಡಿಸಿದ್ದು, ರಾಜ್ಯದಲ್ಲಿ 312 ಸ್ಲೀಪರ್ ಕೋಚ್ ರೈಲು ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸುವ ಕೆಲಸ ಆರಂಭಿಸಲಾಗಿದೆ.
ಕೋವಿಡ್ -19 ಮಹಾಮಾರಿಗೆ ಸಿಲುಕಿದವರ ಚಿಕಿತ್ಸೆಗೆ ಅಗತ್ಯವಾದ ಐಸೋಲೇಷನ್ ಕೊರತೆ ನೀಗಿಸಲು ರೈಲ್ವೆ ಇಲಾಖೆ ಮುಂದಾಗಿದ್ದು ದೇಶಾದ್ಯಂತ 5 ಸಾವಿರ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಲಾಗುತ್ತಿದೆ. ಅದರ ಭಾಗವಾಗಿ ಕೊರೊನಾ ಸೋಂಕಿತರನ್ನು ಇರಿಸಲು ನೈರುತ್ಯ ರೈಲ್ವೆಯಿಂದ 312 ಸ್ಲೀಪರ್ ಕ್ಲಾಸ್ ಬೋಗಿಗಳು ಐಸೋಲೇಷನ್ ವಾರ್ಡ್ಗಳಾಗಿ ಮಾರ್ಪಡಿಸಲಾಗುತ್ತಿದೆ.
ರೈಲ್ವೆ ಬೋಗಿಗಳನ್ನು ಅಗತ್ಯ ಮೂಲಸೌಕರ್ಯದೊಂದಿಗೆ ವೈದ್ಯಕೀಯ ಮಾರ್ಗಸೂಚಿಯಂತೆ ಪರಿವರ್ತಿಸಲಾಗುತ್ತದೆ, ಮೊಬೈಲ್, ಲ್ಯಾಪ್ ಟಾಪ್‌ಚಾರ್ಜರ್, ಸೊಳ್ಳೆಪರದೆಯನ್ನು ಬೋಗಿಗಳು ಒಳಗೊಳ್ಳಲಿದ್ದು, ಪ್ರತಿ ಬೋಗಿಯಲ್ಲಿ 8 ಬರ್ತ್ ಕ್ಯಾಬಿನ್ಗಳನ್ನು ಐಸೋಲೇಷನ್ ವಾರ್ಡ್ ಆಗಿ ಬಳಕೆ ಮಾಡಲಾಗುತ್ತದೆ.
ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದಲ್ಲಿ 120 ಬೋಗಿ, ಮೈಸೂರು ಕಾರ್ಯಾಗಾರದಲ್ಲಿ 120 ಬೋಗಿ, ಹುಬ್ಬಳ್ಳಿ ಡಿಪೋದಲ್ಲಿ 18 ಬೋಗಿ, ಮೈಸೂರು ಡಿಪೋದಲ್ಲಿ 18 ಬೋಗಿ, ಬೆಂಗಳೂರು ಡಿಪೋದಲ್ಲಿ 18 ಬೋಗಿ, ಯಶವಂತಪುರ ಡಿಪೋದಲ್ಲಿ 18 ಬೋಗಿ ಸೇರಿ ಒಟ್ಟು 312 ಬೋಗಿಗಳನ್ನು ಐಸೋಲೇಷನ್ ಕ್ಯಾಬಿನ್ ಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ.
ಐಸೋಲೇಷನ್ ಕಂಪಾರ್ಟ್ಮೆಂಟ್ ನಲ್ಲೇನಿರಲಿದೆ:
• ಪ್ಲಾಸ್ಟಿಕ್ ಪಾರದರ್ಶಕ ಕರ್ಟನ್ ಅಳವಡಿಕೆ
• ಬೋಗಿಯ ಎಲ್ಲಾ 8 ಕ್ಯಾಬಿನ್ ಸೀಲ್ ಮಾಡಲಿದ್ದು ಬೋಗಿಯಿಂದ ಹೊರಹೋಗದಂತೆ ನಿರ್ಬಂಧ ಇರಲಿದೆ
• ಐಸೋಲೇಷನ್ ಬರ್ತ್ನ ಪಕ್ಕದ ಬರ್ತ್ನಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ.
• ಚಾರ್ಜರ್ ಪಾಯಿಂಟ್
• ಎರಡು ಸ್ನಾನದ ಕೋಣೆ,ಬಕೆಟ್ ಹಾಗು ಮಗ್ ಸೌಲಭ್ಯ
• ಎರಡು ಶೌಚಾಲಯ, ಇದರಲ್ಲಿ ಒಂದು ಪಾಶ್ಚಾತ್ಯ ಶೈಲಿಯ ಕಮೋಡ್
• ವಿದ್ಯುತ್ ಸೌಲಭ್ಯ
ರೈಲ್ವೆ ಕೋಚ್ ಗಳನ್ನು ಐಸೋಲೇಷನ್ ವಾರ್ಡ್ಗಳನ್ನಾಗಿ ಮಾರ್ಪಾಡು ಮಾಡುವ ಕೆಲಸ ಇಂದಿನಿಂದ ಪ್ರಾರಂಭಗೊಂಡಿದೆ. ಏಪ್ರಿಲ್ 15 ಕ್ಕೆ ಎಲ್ಲಾ 312. ಬೋಗಿಗಳು ಸೇವೆಗೆ ಸಿದ್ದವಾಗಲಿವೆ,ಒಟ್ಟು 240 ಜನರು ಇದರಲ್ಲಿ ತೊಡಗಿಕೊಂಡಿದ್ದು ಪ್ರತಿ ಬೋಗಿಗೆ 8 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 312 ಕೋಚ್ ಗಳಿಂದ 2400 ಐಸೋಲೇಷನ್ ಬೆಡ್ ಸೌಲಭ್ಯ ಸಿಕ್ಕಂತಾಗಲಿದೆ.
ಸಧ್ಯಕ್ಕೆ ರಾಜ್ಯದಲ್ಲಿ ಐಸೋಲೇಷನ್ ಕೊರತೆ ಸೃಷ್ಟಿಯಾಗಿಲ್ಲ,ಆದರೆ ಈಗಾಗಲೇ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿರುವ ಕಾರಣ ಭವಿಷ್ಯದಲ್ಲಿ ಐಸೋಲೇಷನ್ ಸಮಸ್ಯೆ ಎದುರಾಗಲಿದೆ ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ರೈಲ್ವೆ ಕೋಚ್ಗಳನ್ನು ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತಿಸಿ ಅಗತ್ಯ ಬಿದ್ದಾಗ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬಹುದಾಗಿದೆ.