ಬೆಂಗಳೂರು:ಭಾರತೀಯ ವೈದ್ಯಕೀಯ ಸಂಘವು ವಿಶ್ವದ ಅತಿದೊಡ್ಡ ವೈದ್ಯರ ಸಂಘವಾಗಿದ್ದು, ಆಧುನಿಕ ವೈದ್ಯ ಪದ್ಧತಿಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಭಾರತದ ವೈದ್ಯರ ಸ್ವಯಂ ಸೇವಾ ಸಂಸ್ಥೆಯಾಗಿದೆ. ಇದರಡಿಯಲ್ಲಿ 3 ಲಕ್ಷ ವೈದ್ಯರು 686 ಜಿಲ್ಲೆಯ 1745 ಶಾಖೆಗಳ ಮೂಲಕ ಸದಸ್ಯತ್ವ ಹೊಂದಿದ್ದಾರೆ. ಅದರಲ್ಲಿ ಕರ್ನಾಟಕದ 180 ಶಾಖೆಗಳು ಹಾಗೂ ನಮ್ಮ 28000 ಸದಸ್ಯರುಗಳು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರ ಸುಧಾರಿಸಲು ಸರ್ಕಾರಗಳಿಗೆ ವೈದ್ಯ ಮತ್ತು ರೋಗಿಗಳ ಸಂಬಂಧ ಗಟ್ಟಿಗೊಳಿಸುವ ಜವಾಬ್ದಾರಿ ಇದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಶಿವಕುಮಾರ್ ಬಿ ಲಕ್ಕೋಲ್ ಹೇಳಿದರು.
ಗುರುವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಮುದಾಯ ಆರೋಗ್ಯದಲ್ಲಿ ವೈದ್ಯರು ಭಾಗವಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಳ್ಳಿಯ ಕಡೆ ಕೊಂಡೊಯ್ಯಬೇಕು. ವೈದ್ಯ ಬರಹಗಾರರ ಸಮಿತಿಯ ಮುಖಾಂತರ ಸಾರ್ವಜನಿಕರಿಗೆ ಸಾಮಾನ್ಯ ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಕೈಪಿಡಿಗಳನ್ನು ಪ್ರಕಟಿಸಬೇಕು. ನಮ್ಮ ದೇಶದಲ್ಲಿ ಕುಟುಂಬ ವೈದ್ಯರ ಸೇವೆಯು ಅತ್ಯವಶ್ಯಕ. ಈಗಿನ ತಜ್ಞವೈದ್ಯರ ಹಾಗೂ ಕಾರ್ಪೊರೇಟ್ ಸಂಸ್ಕೃತಿಯಿಂದಾಗಿ ವೈದ್ಯಕೀಯ ಸೇವೆ ಜನಸಾಮಾನ್ಯರ ಕೈಗೆಟುಕದಂತಾಗಿದೆ. ರೋಗಿಯನ್ನು ಅತಿ ಹತ್ತಿರದಿಂದ ಸಂಪೂರ್ಣವಾಗಿ ನೋಡುವ ಕುಟುಂಬವನ್ನು ಮುಖ್ಯವಾಹಿನಿಗೆ ತರುವ ಸಮಯ ಬಂದಿದೆ. ಈ ನಿಟ್ಟಿನಲ್ಲಿ ಕುಟುಂಬ ವೈದ್ಯಶಾಸ್ತ್ರ, ವೈದ್ಯ ಪದ್ಧತಿಯನ್ನು ಹೊಸದಾಗಿ ಸ್ನಾತಕೋತ್ತರ ಪದವಿಗಳಲ್ಲಿ ಸೃಷ್ಟಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ನಕಲಿ ವೈದ್ಯರ ಹಾವಳಿ:ಅಧಿಕೃತ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿ ನೋಂದಾಯಿಸಿದ ಅನರ್ಹ ವೈದ್ಯರು ಒಂದು ಮಿಲಿಯನಷ್ಟಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇವರ ಉಪಟಳ ನಿಲ್ಲಬೇಕಾದರೆ ಸರ್ಕಾರ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.