ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಸಾಲಿಡ್ ಸ್ಟೇಟ್ ಮತ್ತು ಸ್ಟ್ರಕ್ಚರಲ್ ಕೆಮಿಸ್ಟ್ರಿ ಯೂನಿಟ್ನಲ್ಲಿ ಇಂಟಿಗ್ರೇಟೆಡ್ ಪಿಎಚ್ಡಿ ಓದುತ್ತಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. 2022ನೇ ಬ್ಯಾಚ್ನ ದ್ವಿತೀಯ ವರ್ಷದ ವಿದ್ಯಾರ್ಥಿ ಡೈಮೊಂಡ್ ಖುಷ್ವಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಈ ಸಂಬಂಧ ಐಐಎಸ್ಸಿ ಪ್ರಕಟಣೆ ಹೊರಡಿಸಿ, ಕ್ಯಾಂಪಸ್ ಎಲ್ಲರಿಗೂ ಸುರಕ್ಷಿತ ಸ್ಥಳವಾಗಿದೆ. ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ತಕ್ಷಣವೇ ತಮ್ಮ ಕ್ಯಾಂಪಸ್ನಲ್ಲಿ ಲಭ್ಯವಿರುವ ಆಪ್ತ ಸಹಾಯಕರ ನೆರವು ಪಡೆಯಬೇಕು. ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಮಾತನಾಡಲು ಅಗತ್ಯ ಇರುವವರು 24 x 7 ತುರ್ತು ಕರೆ ಸೇವೆ (ಫೋನ್ ಸಂಖ್ಯೆ:080-47113444) ಗೆ ಸಂಪರ್ಕಿಸಬೇಕು ಎಂದು ತಿಳಿಸಿದೆ.