ಬೆಂಗಳೂರು : ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಮಂಗಳೂರು ಮೂಲದ ಶೈಲೇಶ್ ಕುಮಾರ್ ಎಂಬಾತ ಸೌದಿಯಲ್ಲಿ ಬಂಧಿತನಾಗಿದ್ದು, ಬಿಡುಗಡೆಗೆ ನೆರವಾಗಲು ವಿದೇಶಾಂಗ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಸಲಹೆ ನೀಡಿದೆ.
ಮಾಜಿ ವಿದೇಶಾಂಗ ಸಚಿವ ಕುನ್ವರ್ ನಟವರ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸೌದಿ ಅರೇಬಿಯಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿತು. ಶೈಲೇಶ್ ಕುಮಾರ್ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಮೂಲಕ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ, ಸೌದಿಯಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿ ಮೋಯಿನ್ ಅಖ್ತರ್ ಅವರಿಂದ ಶೈಲೇಶ್ ಕುಮಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದ ನ್ಯಾಯಪೀಠ, ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯೂ (ಐಎಫ್ಎಸ್) ಆಗಿದ್ದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಅವರು 'ಒನ್ ಲೈಫ್ ಇಸ್ ನಾಟ್ ಎನಫ್' ಎಂಬ ಪುಸ್ತಕ ರಚಿಸಿದ್ದು, ಅದರಲ್ಲಿ ಇಂಥ ಘಟನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಒಂದೊಮ್ಮೆ ವಿದೇಶವು ನಾವು ಕೋರಿದ ಮಾಹಿತಿ ಒದಗಿಸದಿದ್ದರೆ ಏನು ಮಾಡಬೇಕು ಎಂದು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಇದನ್ನು ಹೇಗೆ ನೋಡಬೇಕು ಎಂದು ತಿಳಿಸಿದ್ದಾರೆ. ಈ ದೃಷ್ಟಿಯಿಂದ ನೀವೇಕೆ ನಟವರ್ ಸಿಂಗ್ ಅವರ ಜೊತೆ ಸಮಾಲೋಚನೆ ಮಾಡಬಾರದು? ಈ ವಿಚಾರಗಳಲ್ಲಿ ಅವರಿಗೆ ಅಗಾಧ ಅನುಭವವಿದೆ ಎಂದು ತಿಳಿಸಿತು.