ಬೆಂಗಳೂರು:ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಹಾಗೂ ನೆದರ್ಲೆಂಡ್ಸ್ ನಡುವಿನ ಪಂದ್ಯಕ್ಕೆ ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಮೈದಾನದ ಸುತ್ತಮುತ್ತ ಸರಕು ಹಾಗೂ ಸಾಗಣಿಕೆ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ.
ವಿಶ್ವಕಪ್‌ನಲ್ಲಿ ಲೀಗ್ ಹಂತದ ಮತ್ತು ಭಾರತ ತಂಡದ ಕೊನೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಾವುದೇ ರೀತಿಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗಿದೆ. ಕ್ಯಾಬ್ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದೆ. ವಾರಾಂತ್ಯ ಆಗಿರುವುದರಿಂದ ನಾಳೆ ಸಾರ್ವಜನಿಕರು ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಸಾಧ್ಯವಾದಷ್ಡು ಕಡಿಮೆ ಮಾಡಿದರೆ ಉತ್ತಮ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಭದ್ರತೆಯ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಎಚ್.ಟಿ ''ಬೆಂಗಳೂರಲ್ಲಿ ವಿಶ್ವಕಪ್‌ನ ಒಟ್ಟು ಐದು ಪಂದ್ಯಗಳು ನಿಗದಿಯಾಗಿದ್ದವು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಪಂದ್ಯ ನಾಳೆ ಭಾರತ - ನೆದರ್ಲ್ಯಾಂಡ್ಸ್ ನಡುವೆ ಲೀಗ್‌ನ ಕೊನೆಯ ಪಂದ್ಯ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, 9 ಜನ ಎಸಿಪಿ, 28 ಎಸ್ಐ, 86 ಜನ ಪಿಎಸ್ಐ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ 4 ಕೆಎಸ್ಆರ್ಪಿ ತುಕಡಿ, 2 ಡಿ.ಸ್ವಾಟ್ಸ್ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ, ಅಹಿತಕರ ಘಟನೆಗಳಾಗದಂತೆ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂನ ಎಲ್ಲಾ ಗೇಟ್ ಬಳಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಎಲ್ಲರೂ ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು'' ಎಂದಿದ್ದಾರೆ.
ಟೂರ್ನಿಯಲ್ಲಿ ಒಂದೂ ಸೋಲು ಕಾಣದೇ ಟೇಬಲ್ ಟಾಪ್ನಲ್ಲಿರುವ ಟೀಮ್ ಇಂಡಿಯಾಕ್ಕೆ ತಳ ಮಟ್ಟದಲ್ಲಿರುವ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಸಾವಾಲು ಒಡ್ಡುತ್ತಿದೆ. ಡಚ್ ತಂಡ ಅಂಕಪಟ್ಟಿಯಲ್ಲಿ ಕೆಳಗೆ ಇರಬಹುದು. ಹಾಗೆಂದ ಮಾತ್ರಕ್ಕೆ ಕೇವಲವಾಗಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಟೂರ್ನಿಯಲ್ಲಿ ಬಲಿಷ್ಟ ಬ್ಯಾಟಿಂಗ್ ಬಲವನ್ನು ಹೊಂದಿರುವ ದಕ್ಷಿಣ ಆಫ್ರಿಕಾವನ್ನೇ ನೆದರ್ಲೆಂಡ್ಸ್ ಮಣಿಸಿತ್ತು.