ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಇಬ್ಬರು ಆರೋಪಿಗಳನ್ನು ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಉಲ್ಲಾ ಖಾನ್ ಹಾಗೂ ಸೈಯ್ಯದ್ ಮುಬಾರಕ್ ಬಂಧಿತ ಆರೋಪಿಗಳು.
ಶುಕ್ರವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಜೆ.ಪಿ.ನಗರದ ಮೊದಲನೇ ಹಂತದಲ್ಲಿರುವ ಪಬ್ ಒಂದರಲ್ಲಿ ಕುಳಿತಿದ್ದ ಆರೋಪಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಆರೋಪಿಗಳ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇತರ ಗ್ರಾಹಕರು, ಜೆ.ಪಿ.ನಗರ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಜೆ.ಪಿ.ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ 'ಮದ್ಯದ ನಶೆಯಲ್ಲಿ ಕೂಗಿದ್ದಾಗಿ' ಆರೋಪಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗಲಭೆಗೆ ಪ್ರಚೋದನೆ, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಾಗಿದೆ.
ವಿಶ್ವಕಪ್ ಬೆನ್ನಲ್ಲೇ ಟಿ20 ಸರಣಿ:2023ರ ಏಕದಿನ ವಿಶ್ವಕಪ್ ಮುಗಿದ ನಾಲ್ಕು ದಿನದಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳ ಸರಣಿ ಆರಂಭವಾಯಿತು. ಮೊದಲ ಎರಡು ಟಿ20 ಪಂದ್ಯದಲ್ಲಿ ಭಾರತ ತಂಡ ಗೆದ್ದುಕೊಂಡಿತು. ಮೂರನೇ ಪಂದ್ಯದಲ್ಲಿ ಆಸೀಸ್ ಗೆದ್ದು ಸರಣಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ರಾಯಪುರದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ 20 ರನ್ಗಳ ಗೆಲುವು ದಾಖಲಿಸಿ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತು.