ಬೆಂಗಳೂರು:ಹಲವು ಇತಿಮಿತಿಗಳ ನಡುವೆಯೂ ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಪ್ರಪಂಚದ ಬೇರಾವ ದೇಶದಲ್ಲೂ ಆಗಿಲ್ಲ. ಈ ವಿಷಯದಲ್ಲಿ ದೇಶವು ಅಮೆರಿಕದಂತಹ ದೈತ್ಯರಾಷ್ಟ್ರಕ್ಕೂ ಮಾದರಿಯಾಗಿದ್ದು, ಇವತ್ತು ಇಡೀ ವಿಶ್ವವೇ ನಮ್ಮನ್ನು ಅನುಸರಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಡಿಜಿಟಲೀಕರಣದಲ್ಲಿ ಭಾರತ ಅಮೆರಿಕಕ್ಕೂ ಮಾದರಿ ಎಂದ ಸಚಿವ ಅಶ್ವತ್ಥನಾರಾಯಣ ಎಫ್.ಕೆ.ಸಿ.ಸಿ.ಐ ಏರ್ಪಡಿಸಿದ್ದ 14ನೇ ವರ್ಷದ ಮಂಥನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶುಕ್ರವಾರದಂದು ಮಾತನಾಡಿದ ಅಶ್ವತ್ಥನಾರಾಯಣ ದೇಶದಲ್ಲಿ ಅನಕ್ಷರತೆ, ಬಡತನ ಮತ್ತು ಮೂಲಸೌಲಭ್ಯಗಳ ಕೊರತೆ ಇನ್ನೂ ಇದೆ. ಇವೆಲ್ಲವನ್ನೂ ಕಿತ್ತೊಗೆಯಬೇಕೆಂದರೆ ತಂತ್ರಜ್ಞಾನಕ್ಕಿಂತ ಅತ್ಯುತ್ತಮ ಸಾಧನ ಇನ್ನೊಂದಿಲ್ಲ. ಇದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲೀಕರಣದ ಕ್ರಾಂತಿಯನ್ನೇ ಸಾಧಿಸುತ್ತಿದ್ದಾರೆ ಎಂದರು.
ಓದಿ:ಸಿಎ ಪರೀಕ್ಷೆ ಪಾಸ್ ಮಾಡಿದ ಜವಳಿ ಕೆಲಸಗಾರನ ಮಗ, ಸರ್ಕಾರಿ ಶಾಲೆ ವಿದ್ಯಾರ್ಥಿನಿ
ಬೆಂಗಳೂರು ಉದ್ಯಮಶೀಲತೆ, ತಂತ್ರಜ್ಞಾನ, ನವೋದ್ಯಮ, ನಾವೀನ್ಯತೆ, ಆವಿಷ್ಕಾರ ರಂಗಗಳಲ್ಲಿ ಜಗತ್ತಿನ ಅಗ್ರಮಾನ್ಯ 30 ನಗರಗಳಲ್ಲಿ ಒಂದಾಗಿದೆ. ದೇಶದಲ್ಲಂತೂ ಸಿಲಿಕಾನ್ ಸಿಟಿಯನ್ನು ಉಳಿದ ನಗರಗಳು ಅನುಸರಿಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು ನಾವೀನ್ಯತಾ ಪ್ರಾಧಿಕಾರ ರಚನೆ ಸೇರಿದಂತೆ ಹತ್ತುಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಉದ್ದಿಮೆಗಳ ಬೆಳವಣಿಗೆಗೆ ನಿರ್ಣಾಯಕ ಸಹಕಾರ ನೀಡುತ್ತಿದೆ ಎಂದು ನುಡಿದರು.
ಅತ್ಯುತ್ತಮ ಅಸ್ತಿತ್ವಕ್ಕೆ ಆಧಾರವಾಗಿದೆ:ಸಬ್ಸಿಡಿ, ಸಾಲ, ರಿಯಾಯಿತಿ ಮತ್ತು ವಿನಾಯಿತಿಗಳ ಆಧಾರದ ಮೇಲೆ ಉದ್ದಿಮೆಗಳನ್ನು ಬೆಳೆಸಲು ಸಾಧ್ಯವಿಲ್ಲ. ಜಾಗತಿಕ ಸ್ಪರ್ಧೆಯ ಈ ದಿನಮಾನದಲ್ಲಿ ಅತ್ಯುತ್ತಮ ಗುಣಮಟ್ಟವೊಂದೇ ನಮ್ಮ ಅಸ್ತಿತ್ವಕ್ಕೆ ಆಧಾರವಾಗಿದೆ. ಈಗ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದಾರಿದೀಪವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಐ.ಎಸ್.ಪ್ರಸಾದ್, ಸುಂದರ್, ಗೋಲಾ ರೆಡ್ಡಿ, ಐಟಿಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ರಾಜ್ಯ ಸರಕಾರದ ಸ್ವಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮುಂತಾದವರಿದ್ದರು.