ಕರ್ನಾಟಕ

karnataka

ETV Bharat / state

ವಿಶ್ವದ ವಿಮಾನಯಾನ ಕ್ಷೇತ್ರದಲ್ಲಿ ಭಾರತ 3ನೇ ಅತಿ ದೊಡ್ಡ ಮಾರುಕಟ್ಟೆ.. ಡಾ. ಕೋಟ ಹರಿನಾರಾಯಣ್

ವಿಮಾನಯಾನ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆ ಎಂದು ಗುರುತಿಸಿಕೊಂಡಿದೆ. ಇದರಿಂದ ಇಷ್ಟರಲ್ಲಿಯೇ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಪ್ರಸಿದ್ಧ ವೈಮಾನಿಕ ತಂತ್ರಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಕೋಟ ಹರಿನಾರಾಯಣ್ ತಿಳಿಸಿದ್ದಾರೆ.

ಏರೋವಿಶನ್-2019 ರಾಷ್ಟ್ರೀಯ ವಿಚಾರ ಸಂಕೀರ್ಣ ಹಾಗೂ ಕಾರ್ಯಕಮ್ಮಟ

By

Published : Oct 14, 2019, 10:29 PM IST

ಬೆಂಗಳೂರು:ವಿಮಾನಯಾನ ಕ್ಷೇತ್ರದಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತ ಮೂರನೇ ಅತಿ ದೊಡ್ಡ ಮಾರುಕಟ್ಟೆ ಎಂದು ಗುರ್ತಿಸಿಕೊಂಡಿದೆ. ಇದರಿಂದ ಇಷ್ಟರಲ್ಲಿಯೇ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಷ್ಟೇ ಸೀಮಿತವಾಗಿದ್ದ ವೈಮಾನಿಕ ಮಾರುಕಟ್ಟೆಯ ಅವಕಾಶಗಳು ಈಗ ನಮ್ಮ ದೇಶದಲ್ಲಿಯೂ ಪ್ರಾಪ್ತವಾಗಲಿವೆ ಎಂಬುದು ಸಂತೋಷದ ಸಂಗತಿ ಎಂದು ಪ್ರಸಿದ್ಧ ವೈಮಾನಿಕ ತಂತ್ರಜ್ಞ ಹಾಗೂ ಪದ್ಮಶ್ರೀ ಪ್ರಶಸ್ತಿಪುರಸ್ಕೃತ ವಿಜ್ಞಾನಿ ಡಾ. ಕೋಟ ಹರಿನಾರಾಯಣ್ ತಿಳಿಸಿದರು.

ಏರೋವಿಶನ್-2019 ರಾಷ್ಟ್ರೀಯ ವಿಚಾರ ಸಂಕೀರ್ಣ ಹಾಗೂ ಕಾರ್ಯಕಮ್ಮಟ..
ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿತಗೊಂಡಿದ್ದ ಏರೋವಿಶನ್-2019 ಆರು ದಿನಗಳ ಅವಧಿಯ ರಾಷ್ಟ್ರೀಯ ವಿಚಾರ ಸಂಕೀರ್ಣ ಹಾಗೂ ಕಾರ್ಯಕಮ್ಮಟದಲ್ಲಿ ಮಾತನಾಡಿದ ಅವರು, ಈಗಾಗಲೇ 19 ಆಸನಗಳ ಸಣ್ಣ ವಿಮಾನಗಳ ತಯಾರಿಕೆಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಇದರಿಂದ ಅತ್ಯಂತ ಕಿರಿದಾದ ರನ್‍ವೇಗಳಲ್ಲೂ ವಿಮಾನ ಲ್ಯಾಂಡ್ ಆಗಲಿದ್ದು, ಈ ದೇಶದ ಸಣ್ಣಪುಟ್ಟ ಪಟ್ಟಣಗಳ ನಡುವೆ ಕೂಡ ವಿಮಾನಗಳು ಸಂಚರಿಸಲಿವೆ. ಇದೊಂದು ಮಹತ್ವಪೂರ್ಣವಾದ ಕ್ರಾಂತಿ ಎಂದರು. ಭಾರತ ಸರ್ಕಾರದ ‘ಉಡಾನ್’ಯೋಜನೆಯ ಅನುಷ್ಠಾನದಿಂದ ಸಣ್ಣಪುಟ್ಟ ನಗರಗಳಿಗೂ ಪಟ್ಟಣಗಳಿಗೂ ವಾಯು ಸಾರಿಗೆ ಲಭ್ಯವಾಗಲಿದೆ. ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಕೈಗೆಟುಕುವ ದರದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಲು ಇದರಿಂದ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ವಾಣಿಜ್ಯ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೂ ಉಡಾನ್’ ನೆರವಾಗಲಿದೆ. ಭಾರತದ ಪ್ರತಿ ಸಣ್ಣ ನಗರವೂ ವಾಯುಯಾನದ ನಕ್ಷೆಯಲ್ಲಿ ಸೇರ್ಪಡೆಯಾದರೆ ಪ್ರಗತಿಯು ಅತ್ಯಂತ ವೇಗವಾಗಿ ಆಗಲಿದೆ. ಪ್ರಸ್ತುತ ವರ್ಷದಲ್ಲಿಯೇ ನೂರಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ದೇಶದಾದ್ಯಂತ ಕಾರ್ಯಾಚರಣೆಗೆ ಸಿದ್ಧವಾಗಲಿವೆ ಎಂದರು. ವಿದ್ಯಾರ್ಥಿಗಳು ಅತ್ಯಂತ ಆಸ್ಥೆಯಿಂದ ವೈಮಾನಿಕ ತಂತ್ರಜ್ಞಾನದ ಅಭಿವೃದ್ಧಿ ಕುರಿತ ಸಂಗತಿಗಳನ್ನು ನೇರವಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಮನನ ಮಾಡಿಕೊಳ್ಳಲು ಸಾಧ್ಯವಾಗುವಂತೆ ಈ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವೈಮಾನಿಕ ತಂತ್ರಜ್ಞಾನ ಕ್ಷೇತ್ರದ ನೂತನ ಆವಿಷ್ಕಾರಗಳಲ್ಲಿ ಬಹುತೇಕ ನಮ್ಮ ದೇಶದಲ್ಲಿಯೇ ನಡೆದಿದ್ದು ನಾವು ಇಂದು ಜಗತ್ತಿಗೆ ನಮ್ಮ ಶಕ್ತಿ ಏನೆಂಬುದನ್ನು ಸಾಬೀತು ಪಡಿಸಿದ್ದೇವೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಹಿರಿಯ ವಿಜ್ಞಾನಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಪ್ರಹ್ಲಾದ್ ರಾಮರಾವ್ ತಿಳಿಸಿದ್ರು.

ABOUT THE AUTHOR

...view details