ಬೆಂಗಳೂರು: ಹೊಸ ಸಚಿವನಾಗಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಯುವಜನತೆಗೆ ಹೊಸ ಕೆಲಸಗಳನ್ನ ಕೊಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಐಟಿ-ಬಿಟಿ ಗಳಲ್ಲಿ ಕೆಲಸ ಮಾಡಲು ಹೆಚ್ಚು ಅವಕಾಶಗಳಿವೆ. ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ಹಚ್ಚು ಒತ್ತು ನೀಡಲಾಗ್ತಿದೆ. ಕೊರೊನಾ ನಂತರ ಭಾರತದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಕೆಲಸಕ್ಕೆ ಹೆಚ್ಚು ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕು ದಿನದ ಜನಾಶಿರ್ವಾದ ಯಾತ್ರೆ ಇದಾಗಿದೆ. ಹುಬ್ಬಳ್ಳಿ ಧಾರವಾಡದಿಂದ ಆರಂಭವಾಗಿದೆ. 800 ಕಿ.ಮೀ ಯಾತ್ರೆ ಮಗಿದಿದೆ. ಆರು ಜಿಲ್ಲೆಗಳಲ್ಲಿ ಯಾತ್ರೆ ಮಾಡಿದ್ದೇನೆ. ನಿನ್ನೆ ರಾತ್ರಿ ಬೆಂಗಳೂರು ಬಂದು ತಲುಪಿದೆ. ಜುಲೈ 4 ರಂದು ಹೊಸ ಅಧ್ಯಾಯ ಆರಂಭವಾಯ್ತು. ಕೇಂದ್ರ ರಾಜ್ಯಖಾತೆ ಸಚಿವರಾಗಿ ಪ್ರಧಾನಿ ಮೋದಿ ಅವರು ಅವಕಾಶ ನೀಡಿದ್ರು. ಒಂದು ಅವಕಾಶ ಸಿಕ್ಕಿದೆ, ಹೊಸ ಭಾರತ ನಿರ್ಮಾಣ ಮಾಡಲು ಅವಕಾಶ ಸಿಕ್ಕಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಾಷ್ಟ್ರಾದ್ಯಂತ ಹೊಸ ಅವಕಾಶಗಳು ದೊರೆಯುತ್ತಿವೆ. ಪ್ರಧಾನಮಂತ್ರಿ ಸ್ಕಿಲ್ ಡೆವಲಪ್ಮೆಂಟ್ ಯೋಜನೆ ಜಾರಿಗೆ ತರಲಾಗಿದೆ.14 ಸಾವಿರ ಐಟಿಐ ಸೆಂಟರ್‌ಗಳು ಇವೆ. ಕಳೆದ ಒಂದು ವರ್ಷದಿಂದ ಹೊಸ ಎಜುಕೇಶನ್ ಪಾಲಿಸಿ ತರಲು ಚಿಂತನೆ ಮಾಡಲಾಗುತ್ತಿದೆ. ಸದ್ಯ ಮಕ್ಕಳು ಒಂದು ನಿರ್ಧಾರ ಮಾಡಬೇಕಿದೆ. ಪಿಯುಸಿ ನಂತರ ಮುಂದುವರೆಯಬೇಕಿತ್ತು. ಅಥವಾ ಶಿಕ್ಷಣದಿಂದ ಹಿಂದೆ ಸರಿಯಬೇಕಿತ್ತು. ಆದರೀಗ ಶಿಕ್ಷಣಕ್ಕೆ ಹೆಚ್ಚು ಅವಕಾಶಗಳು ಸಿಗಲಿವೆ ಎಂದು ಅಭಿಪ್ರಾಯಪಟ್ಟರು.