ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ಏಕಾಏಕಿ ನಗರಕ್ಕೆ ಅಪ್ಪಳಿಸಿದಾಗ, ಇದನ್ನು ಎದುರಿಸಲು ಬಿಬಿಎಂಪಿ ತನ್ನ ಎಲ್ಲ ವ್ಯವಸ್ಥೆ ಸಜ್ಜುಗೊಳಿಸಬೇಕಾಯಿತು. ಈ ಹೋರಾಟದಲ್ಲಿ ಜನರ ಜೀವರಕ್ಷಕವಾಗಿ ಹುಟ್ಟಿಕೊಂಡಿದ್ದೇ ಇಂಡೆಕ್ಸ್ ಆ್ಯಪ್. ನಗರದ ಈ ಸಾಧನೆಗೆ ಭಾರತ ಸರ್ಕಾರದಿಂದ ಇನ್ನೋವೇಶನ್ ಪ್ರಶಸ್ತಿಯೂ ಲಭಿಸಿದೆ.
ಇಂಡೆಕ್ಸ್ ಆ್ಯಪ್ ಬರುವ ಮೊದಲು ಎಕ್ಸೆಲ್ ಶೀಟ್ ಮೂಲಕ, ಇ-ಮೇಲ್ ಮೂಲಕ ಕೋವಿಡ್ ಸೋಂಕಿತರ ಮಾಹಿತಿಯನ್ನು ವಲಯವಾರು ಹಂಚುವಾಗ ಹಲವು ಪ್ರಕರಣಗಳು ಕೈತಪ್ಪಿ ಹೋಗುತ್ತಿದ್ದವು. ಆದರೆ, ಇಂಡೆಕ್ಸ್ ಆ್ಯಪ್ ಬಂದ ನಂತರ ಎಲ್ಲ ಕೋವಿಡ್ ಸೋಂಕಿತರ ಮಾಹಿತಿ ರಾಜ್ಯದ ವಾರ್ ರೂಂನಿಂದ ಬಂದ ಕೂಡಲೇ ಇಂಡೆಕ್ಸ್ ಆ್ಯಪ್ಗೆ ಬರುತ್ತಿದ್ದವು.
ಅಲ್ಲಿರುವ ಸಂಪರ್ಕ ಸಂಖ್ಯೆಗಳಿಗೆ ಆಪ್ತಮಿತ್ರ ಸಿಸ್ಟಂ ಮೂಲಕ ಟೆಲಿಕಾಲರ್ಗಳು, ಎಲ್ಲ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಫೋನ್ ಮಾಡಿ, ನಾಲ್ಕು ಗಂಟೆ ಅವಧಿಯ ಒಳಗಾಗಿ ಇಂಡೆಕ್ಸ್ ಆ್ಯಪ್ನಲ್ಲಿ ನಮೂದಿಸುತ್ತಿದ್ದರು. ಇದರಿಂದ ಯಾರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬುದು ಬೇಗ ತಿಳಿದು, ಹಾಸಿಗೆ ಹೆಚ್ಚು ಅಗತ್ಯ ಇರುವವರ ಪ್ರತ್ಯೇಕ ಪಟ್ಟಿ ಮಾಡಲಾಗುತ್ತಿತ್ತು.
ಯಾರಿಗೆ ವೆಂಟಿಲೇಟರ್ ಬೇಕು, ಐಸಿಯು ಬೇಕು ಈ ಬಗ್ಗೆ ತಕ್ಷಣವೇ ವಲಯ ಕಂಟ್ರೋಲ್ ರೂಂ ನಿಂದ ಸಿಹೆಚ್ಬಿಎಮ್ಎಸ್ ಆ್ಯಪ್ ಮೂಲಕ ಆಸ್ಪತ್ರೆಯ ಬೆಡ್ ಲಭ್ಯತೆ ಬಗ್ಗೆ ಗುರುತು ಮಾಡಿ, ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ಸೋಂಕಿತರಿಗೆ ತಕ್ಷಣವೇ ಫೋನ್ ಮಾಡಿ ಸಹಕರಿಸುತ್ತಿದ್ದರು. ಈ ಮೂಲಕ ಇಂಡೆಕ್ಸ್ ಆ್ಯಪ್ ತಂತ್ರಜ್ಞಾನದ ಮೂಲಕ ಜನರನ್ನು ತಲುಪಿ, ಅವರ ಜೀವ ರಕ್ಷಿಸುವಲ್ಲಿ ಸಹಕಾರಿಯಾಗಿದೆ.
ಆರಂಭದಲ್ಲಿ ಕೋವಿಡ್ ಮೊದಲನೇ ಅಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ, ಯಾವುದೇ ತಂತ್ರಜ್ಞಾನ ಇರಲಿಲ್ಲ. ಎಲ್ಲ ಕೋವಿಡ್ ಪ್ರಕರಣಗಳನ್ನು ರಾಜ್ಯದ ಕೋವಿಡ್ ವಾರ್ ರೂಂ ಪೋರ್ಟಲ್ನಿಂದ ಡೌನ್ಲೋಡ್ ಮಾಡಿ ಸಾಮಾನ್ಯವಾದ ಎಕ್ಸೆಲ್ ಶೀಟ್ನಲ್ಲಿ ದಾಖಲಿಸಿ, ಎಲ್ಲ ವಲಯಗಳಿಗೆ ಕಳಿಸಲಾಗುತ್ತಿತ್ತು. ಇ-ಮೇಲ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿತ್ತು.
ನಂತರ ಸ್ಮಾರ್ಟ್ ಸಿಟಿಯ ಮೂಲಕ ಪಿಡಬ್ಲ್ಯೂಸಿ ಏಜೆನ್ಸಿಯು ಇಂಡೆಕ್ಸ್ ಆ್ಯಪ್ ಸಿದ್ಧಪಡಿಸಿತ್ತು. ಹೀಗಾಗಿ ಇಂಡೆಕ್ಸ್ ಅಪ್ಲಿಕೇಷನ್ ಅನ್ನು ಕೋವಿಡ್ ಮೊದಲನೇ ಅಲೆ ಬಂದಾಗಲೇ ಸಿದ್ಧಪಡಿಸಲಾಗಿದೆ ಅಲ್ಲದೇ, ಇಂದಿಗೂ ಬಳಸಲಾಗುತ್ತಿದೆ.