ಬೆಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪುರಸಭೆ, ನಗರಸಭೆ, ನಗರಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಒಟ್ಟು 418 ಸೀಟುಗಳಿಗೆ ಚುನಾವಣೆ ನಡೆಯಲಿದೆ. ಬಹುತೇಕ ಎಲ್ಲಾ ಕಡೆ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧೆ ಮಾಡ್ತಾರೆ ಎಂದರು.
ಮಂಗಳೂರಿನಲ್ಲಿ ಒಬ್ಬರು ಮುಸ್ಲಿಂ ಕಾರ್ಪೊರೇಟರ್ ಇದ್ದಾರೆ. ಮಂಗಳೂರಿನಲ್ಲಿ ಎಲ್ಲಾ ಕಡೆ ನಾವು ಸ್ಪರ್ಧಿಸುತ್ತೇವೆ. ಐದಾರು ಕಡೆ ನಾವು ಗೆಲ್ಲುವ ಸಾಧ್ಯತೆ ಇದೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಬಿ ಎಂ ಫಾರೂಕ್ ಹತ್ತಿರ ಕೂಡ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು.. ಮಂಗಳೂರಿನಲ್ಲಿ ನಾನೇ ಹೋಗಿ ಪ್ರಚಾರ ಮಾಡುತ್ತೇನೆ. ನಾನು ಇಲ್ಲಿ ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ ಎಂದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ನಲ್ಲಿ ಖಾಲಿ ಇರುವ ಕಡೆ ಸ್ಪರ್ಧೆ ಮಾಡುವುದರ ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಕಡೆ ಸ್ಪರ್ಧೆ ಮಾಡುತ್ತೇವೆ. ಇನ್ನು, ದಾವಣಗೆರೆಯಲ್ಲಿ ಸಂಪೂರ್ಣವಾಗಿ ನಮಗೆ ಬಲ ಇದೆ ಎಂದು ಹೇಳಲ್ಲ. ಅಲ್ಲಿನ ಮುಖಂಡರ ಜೊತೆ ಮಾತನಾಡಿ ಸ್ಪರ್ಧೆ ಮಾಡ್ತೇವೆ ಎಂದು ಹೇಳಿದರು.
ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ:
ಯಾದಗಿರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಅಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಆ ಪ್ರತಿಭಟನೆಯಲ್ಲಿ ನಾನು ಪಾಲ್ಗೊಳ್ಳುತ್ತೇನೆ ಎಂದರು. ನನ್ನ ಕಾರ್ಯಕರ್ತರಿಗೆ ಎಲ್ಲೇ ತೊಂದರೆಯಾದರೂ ನಾನು ಸುಮ್ಮನೆ ಇರೋದಿಲ್ಲ. ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಗುಡುಗಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಅನುದಾನಕ್ಕೆ ಸಿಎಂ ಯಡಿಯೂರಪ್ಪ ತಡೆ ನೀಡಿದ್ದರು. ನಾಗನಗೌಡ ಕಂದಕೂರು ಕ್ಷೇತ್ರದಲ್ಲಿ ಅನುದಾನ ತಡೆಹಿಡಿದಿದ್ದರಿಂದ ಅವರು ಕಾರು ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಕಾರ್ಯಕರ್ತರ ಮೇಲೆ ಹಲವು ಮೊಕದ್ದಮೆ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತನಿಗೆ ಹಿಂಸೆ ನೀಡುತ್ತಿದ್ದಾರೆ. ಅಲ್ಲಿನ ಎಸ್‌ಪಿ ಜೊತೆ ಕುಮಾರಸ್ವಾಮಿ ಅವರು ಸಹ ಮಾತನಾಡಿದ್ರು. ಪೊಲೀಸರನ್ನು ಸಸ್ಪೆಂಡ್ ಮಾಡ್ತೀವಿ ಎಂದು ಹೇಳಿದ್ರು, ಆ ನಂತರ ಒತ್ತಡ ಬಂದಿರಬೇಕು. ಹೀಗಾಗಿ ಅವರು ಏನು ಕ್ರಮ ಕೈಗೊಂಡಿಲ್ಲ. ಯಾರ ಒತ್ತಡ ಎಂದು ನಾನು ಹೇಳುವುದಿಲ್ಲ. ಹೀಗಾಗಿ ನಾನು ನಾಳೆ ಅಲ್ಲಿ ಹೋಗಿ ನೋಡಿ ಆಮೇಲೆ ಮಾತಾಡ್ತೀನಿ ಎಂದರು.