ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಗಂಟಲು ನೋವು, ಕೆಮ್ಮು, ಶೀತ, ನೆಗಡಿ ಮತ್ತಿತರ ಸೋಂಕಿನ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಗಳ ಮುಖ್ಯ ಲಕ್ಷಣವೇ ಜ್ವರ. ಮಳೆ ಬಿದ್ದಾಗ ಸೊಳ್ಳೆ ಹೆಚ್ಚಾಗುವುದರಿಂದ ಡೆಂಘೀ, ಟೈಫಾಯ್ಡ್, ವೈರಾಣು ಜ್ವರ, ಕಾಲರ ಇನ್ನಿತರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಈ ಎಲ್ಲ ಕಾಯಿಲೆಗಳ ಆರಂಭದಲ್ಲಿ ಜ್ವರವಷ್ಟೇ ಕಾಣಿಸಿಕೊಂಡರೂ, ಜೊತೆಯಲ್ಲೇ ಇತರ ನಿರ್ದಿಷ್ಟ ಗುಣಲಕ್ಷಣ ಕಾಣಿಸುತ್ತವೆ.
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಕಾಯಿಲೆಗಳು ಮಳೆ ಹೆಚ್ಚಾಗಿರುವ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಘೀ ರೋಗ ಲಕ್ಷಣಗಳು ಕಾಣಿಸಿಕೊಂಡಿವೆ.
ಜನವರಿಯಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿಯ ರಕ್ತ ಮಾದರಿ ಪರೀಕ್ಷೆ ನಡೆಸಲಾಗಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಇದರ ಪರಿಣಾಮ ಡೆಂಘೀ ಹೆಚ್ಚುತ್ತಿದೆ. ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ರಾಜ್ಯದಲ್ಲಿ ರೋಗ ವಾಹಕಗಳ ಅರಳುವಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಘೀ ರೋಗ ಲಕ್ಷಣಗಳೇನು?:ತ್ಯಾಜ್ಯಗಳಲ್ಲಿ ನೀರು ಸಂಗ್ರಹ ತಡೆಯಬೇಕು. ಮಳೆಗಾಲದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಘನತಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುವುದು ಅಗತ್ಯವಾಗಿದೆ. ದಿಢೀರ್ ಜ್ವರ, ತೀವ್ರ ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ ಮತ್ತು ಮೈ ಮೇಲೆ ಕೆಂಪು ಬಣ್ಣದ ಗದ್ದುಗಳು ಡೆಂಘೀ ರೋಗ ಲಕ್ಷಣಗಳಾಗಿವೆ.
ಹೀಗಾಗಿ, ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ ಡೆಂಘೀ ಮಾರಣಾಂತಿಕ ವಾಗಬಹುದು. ಆದ್ದರಿಂದ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆದು, ರಕ್ತ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮಗಳೇನು?- ವೈದ್ಯರು ಹೇಳುವುದೇನು? : ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಸೊಳ್ಳೆಗಳು ಹೆಚ್ಚಾಗದಂತೆ ನೋಡಿಕೊಳ್ಳಬೇಕು. ನೀರು ಮತ್ತು ಆಹಾರ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ.
ಮಳೆಗಾಲದಲ್ಲಿ ಜ್ವರ, ಮಲೇರಿಯಾ, ಡೆಂಘೀ ಇನ್ನಿತರ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳಿಂದ ಹೆಚ್ಚಾಗುತ್ತವೆ. ಆದ್ದರಿಂದ, ಸಾರ್ವಜನಿಕರು ಮತ್ತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕಸದ ರಾಶಿಗಳನ್ನು ತೆರವುಗೊಳಿಸಬೇಕು. ಎಲ್ಲೆಡೆ ತ್ಯಾಜ್ಯ ಸುರಿಯುವುದನ್ನು ಕಡಿಮೆ ಮಾಡಬೇಕು. ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗ ಸೊಳ್ಳೆಗಳ ಸಂತಾನೋತ್ಪತ್ತಿ ತಪ್ಪುತ್ತದೆ. ಆಗ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಕುದಿಸಿ ಆರಿಸಿದ ನೀರು ಸೇವಿಸಬೇಕು. ಬಿಸಿಯಾದ ಊಟ, ಶುದ್ಧ ಆಹಾರ ಸೇವಿಸಬೇಕು. ಬಯಲಲ್ಲಿ ಮಲ ವಿಸರ್ಜನೆ ಮಾಡದೆ ಕಡ್ಡಾಯವಾಗಿ ಶೌಚಾಲಯ ಬಳಸಬೇಕು.
ಹೋಟೆಲ್ಗಳಲ್ಲಿ ಶುದ್ಧ ಆಹಾರ ಮತ್ತು ಕುಡಿಯಲು ಬಿಸಿನೀರು ನೀಡಬೇಕು. ತ್ಯಾಜ್ಯ ವಸ್ತುಗಳನ್ನು ಜನವಸತಿ ಪ್ರದೇಶದ ಹೊರಗಡೆ, ನಿಗದಿತ ಸ್ಥಳದಲ್ಲಿ ಹಾಕಬೇಕು. ಗ್ರಾಮ ಮತ್ತು ಬಡಾವಣೆ, ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ತೆರೆದಿಟ್ಟ ತಿಂಡಿ ತಿನಿಸುಗಳು ಮತ್ತು ಕತ್ತರಿಸಿ ಇಟ್ಟಿರುವ ಹಣ್ಣುಗಳನ್ನು ತಿನ್ನಬಾರದು. ಊಟಕ್ಕೆ ಮುಂಚೆ ಹಾಗೂ ಮಲ ವಿಸರ್ಜನೆ ನಂತರ ಕೈಗಳನ್ನು ಸ್ವಚ್ಛ ನೀರಿನಿಂದ ತೊಳೆದುಕೊಳ್ಳಬೇಕು. ಬೆಚ್ಚನೆಯ ಹತ್ತಿ ಬಟ್ಟೆಗಳನ್ನು ತೊಡಬೇಕು ಎಂದುಡಾ. ಪ್ರಕಾಶ್ಮಾಹಿತಿ ನೀಡಿದ್ದಾರೆ.
ರೋಗದ ಲಕ್ಷಣಗಳ್ಯಾವುವು?:ಚಿಕೂನ್ ಗುನ್ಯ ರೋಗಿ ಜ್ವರದೊಂದಿಗೆ, ಕಾಲು ಮತ್ತು ಕೈಗಳ ಕೀಲುಗಳಲ್ಲಿ ಊತ ಹಾಗೂ ನೋವು ಅನುಭವಿಸುತ್ತಾನೆ. ವೈರಾಣು ಜ್ವರ ಪೀಡಿತ ವ್ಯಕ್ತಿ ಇಡೀ ದೇಹದಲ್ಲಿ ನೋವು ಮತ್ತು ಆಯಾಸ ಅನುಭವಿಸುತ್ತಾನೆ. ಒಮ್ಮೊಮ್ಮೆ ಗಂಟಲು ನೋವು, ಶೀತ ಮತ್ತು ಕೆಮ್ಮು ಬರಬಹುದು. ಮಲೇರಿಯಾ ಕಾಯಿಲೆಯ ಮುಖ್ಯ ಗುಣಲಕ್ಷಣ ಚಳಿ - ಜ್ವರ. ಟೈಫಾಯ್ಡ್ ರೋಗ ಲಕ್ಷಣ ಜ್ವರದ ಜೊತೆಗೆ ತಲೆನೋವು, ಹೊಟ್ಟೆನೋವು, ವಾಂತಿ, ಕೆಲವೊಮ್ಮೆ ಅತಿಸಾರವೂ ಆಗಬಹುದು.
ಶಾಲಾ ಮಕ್ಕಳಿಗೆ ಎಚ್ಚರಿಕೆ :ಮಳೆಗಾಲದಲ್ಲಿ ಶಾಲಾ - ಕಾಲೇಜುಗಳಿಗೆ ಹೋಗುವ ಮಕ್ಕಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಶಾಲಾ ಮಕ್ಕಳು ಮಳೆಯಲ್ಲಿ ನೆನೆಯಬಾರದು. ನೀರಿನಲ್ಲಿ ಆಟವಾಡುವುದರಿಂದ ಶೀತ, ಜ್ವರ, ಕೆಮ್ಮು ಬರುವ ಸಾಧ್ಯತೆ ಹೆಚ್ಚು. ಹಾಗಾಗಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಮುಂಜಾಗ್ರತೆ ವಹಿಸುವುದು ಹೆಚ್ಚು ಸೂಕ್ತ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ:IPSN : ಸಾಂಕ್ರಾಮಿಕ ರೋಗ ಪತ್ತೆ, ತಡೆಗೆ WHO ಹೊಸ ಜಾಗತಿಕ ಜಾಲ