ಬೆಂಗಳೂರು : ರಾಜ್ಯ ಬಿಜೆಪಿ ಪಾಳಯದಲ್ಲಿ ನೂತನ ಸಾರಥಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಆರಂಭಗೊಂಡಿದೆ. ಇಷ್ಟು ದಿನ ತೆರೆ ಮೆರೆಯಲ್ಲಿ ನಡೆಯುತ್ತಿದ್ದ ಪೈಪೋಟಿ ಇದೀಗ ಬಹಿರಂಗವಾಗಿಯೇ ನಡೆಯಲು ಆರಂಭಗೊಂಡಿದ್ದು, ಕುರ್ಚಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ, ರಾಜ್ಯಾಧ್ಯಕ್ಷ ಸ್ಥಾನ ಬಹಳ ಮಹತ್ವದ್ದಾಗಿದೆ. ಪಕ್ಷಕ್ಕೆ ಲಾಭದಾಯಕವಾಗಿ ಕೆಲಸ ಮಾಡಬಲ್ಲ ಸಂಘಟನಾ ಚತುರನ ಆಯ್ಕೆ ಇದೀಗ ಬಿಜೆಪಿ ಹೈಕಮಾಂಡ್ ನ ಸವಾಲಾಗಿ ಪರಿಣಮಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಮುಗಿದಿದ್ದು ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ನೂತನ ನಾಯಕನ ಆಯ್ಕೆ ಸುಳಿವು ಸಿಗುತ್ತಿದ್ದಂತೆ ನಾ ಮುಂದು ತಾ ಮುಂದು ಎನ್ನುವಂತೆ ರಾಜ್ಯ ಬಿಜೆಪಿ ನಾಯಕರು ಅವಕಾಶಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆಯಲ್ಲಿದ್ದು, ಶೋಭಾ ಕರಂದ್ಲಾಜೆ, ಸಿ.ಟಿ ರವಿ, ಸುನೀಲ್ ಕುಮಾರ್ ಹೆಸರುಗಳು ರೇಸ್ನಲ್ಲಿವೆ. ಅಶ್ವತ್ಥನಾರಾಯಣ್ ಹೆಸರೂ ಚಾಲ್ತಿಯಲ್ಲಿದೆ. ಅಶೋಕ್ ಕೂಡ ಲಾಭಿ ನಡೆಸುತ್ತಿದ್ದಾರೆ. ಇವರ ಜೊತೆಗೆ ಇದೀಗ ವಿ.ಸೋಮಣ್ಣ ಸೇರಿಕೊಂಡಿದ್ದು, ಬಹಿರಂಗವಾಗಿಯೇ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.
ಇಷ್ಟು ದಿನ ಪಕ್ಷದ ಒಳಗಡೆ ಮಾತ್ರ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಬಗ್ಗೆ ನಾಯಕರು ಚರ್ಚೆ ನಡೆಸಿ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ಈ ಚರ್ಚೆ ಬಹಿರಂಗಗೊಂಡಿದ್ದು, ಬಹಿರಂಗವಾಗಿಯೇ ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಚಿವ ಸೋಮಣ್ಣ ನನಗೆ ಅವಕಾಶ ನೀಡಿ 100 ದಿನದಲ್ಲಿ ಬದಲಾವಣೆ ತರುತ್ತೇನೆ ಎಂದು ಘೋಷಿಸಿದ್ದಾರೆ. ರಮೇಶ್ ಜಿಗಜಿಣಗಿ ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಮೂಲಕ ತಾವೂ ಈಗ ರೇಸ್ ಗೆ ಬಂದಿರುವ ಸುಳಿವು ನೀಡಿದ್ದಾರೆ.
ಆದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಶೋಭಾ ಕರಂದ್ಲಾಜೆ ಹೆಸರು ಮುಂದೂಣಿಯಲ್ಲಿದೆ. ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಲ್ಲ. ದೆಹಲಿ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅವರ ಹೆಸರು ಮಾತ್ರ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬರುತ್ತಿದೆ. ಇನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ ರವಿ ಹೆಸರು ಚಾಲ್ತಿಯಲ್ಲಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘಟನೆ ಜವಾಬ್ದಾರಿ ವಹಿಸಿಕೊಂಡು ಹೈಕಮಾಂಡ್ ಮೆಚ್ಚುಗೆಗೆ ಪಾತ್ರವಾಗಿರುವ ಸಿಟಿ ರವಿ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಜವಾಗಿಯೇ ಕೇಳಿ ಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ ಟಿ ರವಿ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುವುದಷ್ಟೇ ನನ್ನ ಕೆಲಸ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಹಿಂದೆ ಸಚಿವನಾಗಿದ್ದಾಗ ಸಂಘಟನೆಗೆ ಬರುವಂತೆ ಕರೆ ನೀಡಿದರು. ಅದರಂತೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಿಕೊಂಡೆ. ಈಗಲೂ ಪಕ್ಷ ಏನು ಹೇಳಲಿದೆಯೋ ಅದನ್ನು ಮಾಡಲು ಸಿದ್ದ ಎಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿದ್ಧ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.