ಬೆಂಗಳೂರಿನಲ್ಲಿ ಗರಿಗೆದರಿದ ಪಟಾಕಿ ವ್ಯಾಪಾರ ಬೆಂಗಳೂರು: ನಗರದಲ್ಲಿ ಶುಕ್ರವಾರದಿಂದ ಹಸಿರು ಪಟಾಕಿ ವ್ಯಾಪಾರ ಕಳೆ ಗುಂದಿತ್ತು. ಆದರೆ, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಜನರು ಕೇವಲ ಹಸಿರು ಪಟಾಕಿ ಕೊಂಡು ದೀಪಾವಳಿ ಹಬ್ಬ ಆಚರಿಸಬೇಕು ಎನ್ನುವುದನ್ನು ಮನಗಂಡಿದ್ದರಿಂದ ಸೋಮವಾರದಿಂದ ವ್ಯಾಪಾರ ವೇಗ ಪಡೆದಿದೆ. ಹಾಗೆಯೇ ನಾಳಿನ ಬಲಿಪಾಡ್ಯಮಿ ಆಚರಣೆಗೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ಇಂದು ಅಮಾವಾಸ್ಯೆಯ ಲಕ್ಷ್ಮಿ ಪೂಜೆ ಮತ್ತು ನಾಳೆಯ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ನಗರದ ಪಾಲಿಕೆ ವ್ಯಾಪ್ತಿಯಲ್ಲಿನ ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. 5 ಸಾವಿರ ರೂಪಾಯಿಗಳಷ್ಟು ಡೆಪಾಸಿಟ್ ಇರಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಅಂಗಡಿಗಳನ್ನು ತೆರೆಯಲಾಗಿದೆ. ಪಾಲಿಕೆ ವ್ಯಾಪ್ತಿಯ 62 ಮೈದಾನಗಳಲ್ಲಿ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಲಾಗಿದ್ದು, 263 ಮಳಿಗೆಗಳನ್ನು ತೆರಯಲಾಗಿದೆ. ಕಳೆದ ವರ್ಷ 65 ಮೈದಾನಗಳಲ್ಲಿ 244 ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು.
ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಗಾಂಧಿನಗರದ ಆಟದ ಮೈದಾನದಲ್ಲಿ ಯಾವುದೇ ರೀತಿಯಲ್ಲಿ ಅವಘಡ ಸಂಭವಿಸದಂತೆ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿಯಮದಂತೆ ಲೈಸೆನ್ಸ್ ಹೋಲ್ಡರ್ ಸ್ಥಳದಲ್ಲಿ ಕಡ್ಡಾಯವಾಗಿ ಇರಬೇಕು ಎನ್ನುವುದನ್ನು ಪಾಲಿಸಲಾಗುತ್ತಿದೆ. ಗ್ರಾಹಕರು ಸಹ ಪಟಾಕಿ ಸಿಡಿಸಬೇಕಾದರೆ ಎಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪಟಾಕಿ ಮಾರಾಟಗಾರರಾದ ವಿ.ಬಿ ಬಾಬು ಈಟಿವಿ ಭಾರತಕ್ಕೆ ತಿಳಿಸಿದರು.
ಮೂರು ವರ್ಷದಿಂದ ಎಲ್ಲ ಅಧಿಕೃತ ಪಟಾಕಿ ಮಾರಾಟಗಾರರು ಹಸಿರು ಪಟಾಕಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರು ಸಹ ಹಸಿರು ಪಟಾಕಿಯನ್ನೇ ಕೇಳಿ ಪಡೆಯುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಸಹ ಬಂದು ಎಲ್ಲ ಮುನ್ನಚೆರಿಕೆ ಕ್ರಮಗಳನ್ನು ನೋಡಿ ಹೋಗಿದ್ದಾರೆ. ನಾವು ಕೂಡ ಎಲ್ಲ ರೀತಿಯಲ್ಲಿ ನಿಯಮಗಳನ್ನು ಪಾಲನೆ ಮಾಡುತ್ತಿದ್ದೇವೆ ಎಂದು ಪಟಾಕಿ ವ್ಯಾಪಾರಿ ಸೂರ್ಯ ಪ್ರಕಾಶ್ ಹೇಳಿದರು.
ಪಟಾಕಿ ವ್ಯಾಪಾರಿ ದಿಲೀಪ್ ಮಾತನಾಡಿ, ತಂದೆಯ ಕಾಲದಿಂದಲೂ ಪಟಾಕಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವುದು ಹಿಂದೂ ಧರ್ಮದ ಸಂಸ್ಕೃತಿಯಾಗಿದೆ. ವರ್ಷದಿಂದ ವರ್ಷಕ್ಕೆ ವ್ಯಾಪಾರ ಕಡಿಮೆಯಾಗುತ್ತಾ ಬರುತ್ತಿದೆ. ಸುಪ್ರೀಂ ಕೋರ್ಟ್ ಹಸಿರು ಪಟಾಕಿಯನ್ನು ಕಡ್ಡಾಯ ಮಾಡಿದೆ. ಇದು ಎಲ್ಲರಿಗೂ ಒಳ್ಳೆಯ ಕ್ರಮವಾಗಿದೆ. ಇದರಲ್ಲಿ ಬೇರಿಯುಮ್ ನೈಟ್ರೇಟ್ ಕಡಿಮೆಯಿದೆ. ಕೆಲ ಮಾಧ್ಯಮಗಳು ಪಟಾಕಿಗಳೇ ಬ್ಯಾನ್ ಆಗಿದೆ ಎಂದು ಹೇಳುತ್ತಿವೆ. ಅದರಿಂದ ಜನರಿಗೆ ದಾರಿ ತಪ್ಪಿಸಿದಂತಾಗುತ್ತದೆ. ಆದ್ದರಿಂದ ಜನರು ಅಧಿಕೃತ ಮಾರಾಟಗಾರರ ಹತ್ತಿರ ಪಟಾಕಿಗಳನ್ನು ಕೊಂಡು ಎಚ್ಚರಿಕೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದರು.
ದಂಪತಿಗಳಾದ ರವಿ ಮತ್ತು ಶಕುಂತಲಾ ಮಾತನಾಡಿ, ಹಲವು ವರ್ಷಗಳಿಂದ ಹಸಿರು ಪಟಾಕಿಯನ್ನೇ ಕೊಂಡುಕೊಳ್ಳುತ್ತಿದ್ದೇವೆ. ಮಕ್ಕಳಿಗಾಗಿ ಈ ಪಟಾಕಿಗಳನ್ನು ಕೊಂಡುಕೊಂಡಿದ್ದೇವೆ. ಆದಷ್ಟು ಕಡಿಮೆ ಪಟಾಕಿ ತಗೆದುಕೊಂಡು, ಪರಿಸರಕ್ಕೂ ಹಾನಿ ಆಗದಂತೆ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬಲಿಪಾಡ್ಯಮಿ ಆಚರಣೆಗೆ ಜನತೆ ಸಜ್ಜು:ನಾಳಿನ ಬಲಿಪಾಡ್ಯಮಿ ಆಚರಣೆಗೆ ಜನತೆ ಸಜ್ಜಾಗಿದ್ದಾರೆ. ನಗರದ ಕೆ.ಆರ್. ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ನಸುಕಿನಿಂದಲೇ ಗ್ರಾಹಕರು ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಿದರು. ಬಾಳೆಕಂದು, ಮಾವಿನೆಲೆ, ಹೂಹಣ್ಣುಗಳ ಖರೀದಿ ಜೋರಾಗಿತ್ತು. ನಗರದ ವಿವಿಧ ಮಾರುಕಟ್ಟೆಯಲ್ಲಿ ಹೂ ಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆಯಿತು. ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲೂ ಹಬ್ಬದ ಪರಿಕರಗಳ ಮಾರಾಟ ಹೆಚ್ಚಾಗಿತ್ತು.
ಅಗತ್ಯ ವಸ್ತುಗಳ ವ್ಯಾಪಾರ ಜೋರು ದೀಪ ಸಂಜೀವಿನಿ ಪ್ರದರ್ಶನ:ಮಹಿಳೆಯರೇ ತಯಾರಿಸಿದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆ ನಗರದ ಎಂ.ಎಸ್. ಬಿಲ್ಡಿಂಗ್, ಕೆಪಿಟಿಸಿಎಲ್ ಆವರಣ ಹಾಗೂ ಬಿಬಿಎಂಪಿ ಆವರಣದಲ್ಲಿನ ಅಂಗಡಿ ಹಾಕಿ ದೀಪ ಸಂಜೀವಿನಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಈ ಬಗ್ಗೆ ಮಾತನಾಡಿದ ಮೈಸೂರಿನ ಟಿ.ನರಸೀಪುರ ತಾಲೂಕಿನ ಭೀಮಾ ಬಾಯಿ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯೆ ಶೃತಿ ಗೋವಿಂದ್ ಅವರು, ''ಆನೆ ದೀಪ, ಗಣೇಶ ದೀಪ, ಏಳು ಮತ್ತು 9 ದೀಪಗಳನ್ನು ಒಳಗೊಂಡ ದೀಪ, ನವಿಲು ದೀಪ, ಮ್ಯಾಜಿಕ್ ದೀಪ, ಲ್ಯಾಂಪ್ ಸೇರಿದಂತೆ ವಿವಿಧ ವಿನ್ಯಾಸದ ಆಕರ್ಷಕ ದೀಪಗಳನ್ನು ಕಳೆದ ಎರಡು ತಿಂಗಳಿಂದ ಸಿದ್ಧಗೊಳಿಸಿದ್ದೇವೆ. ಬಹುಮಹಡಿ ಕಟ್ಟಡದಲ್ಲಿ ಸ್ಟಾಲ್ ಹಾಕಿದ್ದು, ಸುತ್ತಲಿನ ವಿಕಾಸ ಸೌಧ, ವಿಧಾನಸೌಧ, ಆಡಿಟ್ ಭವನ ಹಾಗೂ ಎಂ.ಎಸ್. ಬಿಲ್ಡಿಂಗ್ನಲ್ಲಿ ಕೆಲಸ ಮಾಡುವ ನೌಕರರು ಬಂದು ತಮಗಿಷ್ಟವಾದ ದೀಪಗಳನ್ನು ಖರೀದಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಗಿಂತ ಈ ಸಲ ವ್ಯಾಪಾರವು ಚೆನ್ನಾಗಿ ಆಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದೇಶದ ಪಟಾಕಿ ಕೇಂದ್ರ 'ಶಿವಕಾಶಿ'ಗೆ 50 ಕೋಟಿ ರೂಪಾಯಿ ವ್ಯವಹಾರ ನಷ್ಟ: ವರದಿ