ಬೆಂಗಳೂರು:ಚಾಲಕರ ಸಂಚಾರಿ ನಿಯಮಗಳನ್ನು ಪಾಲಿಸದಿರುವುದು ಹಾಗೂ ಅಧಿಕೃತ ಚಾಲನಾ ದಾಖಲೆಗಳಿಲ್ಲದೇ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿರುವ ಹೈಕೋರ್ಟ್, ಅತಿ ವೇಗದ ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಅಪರಾಧಿಯೊಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಉದ್ದೇಶಪೂರ್ವಕವಲ್ಲದ ಕೊಲೆ ಆರೋಪದಲ್ಲಿ ಆರು ತಿಂಗಳ ಕಾಲ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹನುಮಂತರಾಯಪ್ಪ ಎಂಬುವರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪಂಜಾಬ್ ರಾಜ್ಯ ಸರ್ಕಾರದ ವಿರುದ್ಧದ ಸೌರಭ್ ಬಕ್ಷಿ ಪ್ರಕರಣ ಹಾಗೂ ಗುರು ಬಸವರಾಜ ಬೆಣ್ಣೆ ಸಟ್ಟಪ್ಪ ವಿರುದ್ಧದ ಕರ್ನಾಟಕ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಸಾಕ್ಷ್ಯಾಧಾರಗಳು ಹಾಗೂ ವಿಚಾರಣಾ ನ್ಯಾಯಾಲಯದ ಆದೇಶಗಳ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಶಿಕ್ಷೆ ವಿಧಿಸಿರುವುದು ಸರಿಯಾಗಿದೆ. ಈ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.