ಬೆಂಗಳೂರು:ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ನಂತರವೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿದಲ್ಲಿ ಮಾತ್ರ ಪಂಚಮಸಾಲಿ ಸಮಾಜದ 2ಎ ಸೇರ್ಪಡೆಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ ಎಂದು ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡುವ ಮೊದಲೇ ಮುಖ್ಯಮಂತ್ರಿಗಳೇ ನೇರವಾಗಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎಗೆ ಸೇರ್ಪಡೆ ಘೋಷಣೆ ಮಾಡಿದಲ್ಲಿ ಕಾನೂನು ಸಮಸ್ಯೆ ಎದುರಾಗಬಹುದು, ಯಾರಾದರೂ ಇದನ್ನು ಪ್ರಶ್ನಿಸಿ ಕೋರ್ಟ್ಗೆ ಹೋದಲ್ಲಿ ನ್ಯಾಯಾಲಯದಲ್ಲಿ 2ಎ ಸೇರ್ಪಡೆ ವಿಚಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದರು.
ಕಾಯ್ದೆಯ ಪರಿಮಿತಿಯೊಳಗೆ ನಾವು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಗತ್ಯ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದೇವೆ. ಆರ್ಥಿಕ ಸ್ಥಿತಿಗತಿಯ ವಿಚಾರ ಇಲ್ಲಿ ಬರಲ್ಲ. ಶೈಕ್ಷಣಿಕ ಮತ್ತು ಸಾಮಾಜಿಕ ಹಿಂದುಳಿವಿಕೆಯನ್ನು ಮಾತ್ರ ನಾವು ಆಯೋಗಕ್ಕೆ ಕೊಡಬೇಕಿದೆ. ಅದೇ ರೀತಿ ನಾವು ಮಾಹಿತಿಗಳನ್ನು ದಾಖಲೆ ಸಮೇತ ಕೊಟ್ಟು ಬಂದಿದ್ದೇವೆ. ಆದಷ್ಟು ಬೇಗ ನಿಗದಿತ ಕಾಲಮಿತಿಯಲ್ಲಿ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ನಂತರ ಸಂಪುಟದ ಸಮ್ಮತಿ ಪಡೆದು ಸರ್ಕಾರ ಆದೇಶ ಹೊರಡಿಸಿದಲ್ಲಿ, ಪಂಚಮಸಾಲಿ ಸಮುದಾಯದ 2ಎ ಸೇರ್ಪಡೆಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ ಎಂದರು.