ಬೆಂಗಳೂರು: ಶಿಲ್ಪ ಕೆತ್ತನೆ ಮತ್ತು ಮರದ ಕೆತ್ತನೆಯ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ಪ್ರೋತ್ಸಾಹಧನವನ್ನು ಈಗಿನ 750 ರೂಪಾಯಿಗಳಿಂದ 1,500 ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ತಿಳಿಸಿದ್ದಾರೆ.
ವಿಕಾಸೌಧದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಸಾಗರದಲ್ಲಿನ ‘ಶಿಲ್ಪ ಗುರುಕುಲದಲ್ಲಿ’ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ 17 ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ಸಚಿವರು ಮಾತನಾಡುತ್ತಾ, ಕಲ್ಲು ಮತ್ತು ಮರ ಕೆತ್ತನೆ ತರಬೇತಿಯ ಮತ್ತೊಂದು ಕೇಂದ್ರವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.