ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮ ನಡೆಸುವ ಹಾಗಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ಇಂದು ಸಭೆ ನಡೆಸಿದ್ದೇವೆ. ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ರಿಪೋರ್ಟ್ ಜನರಿಗೆ ನೀಡ್ತಿದ್ದಾರೆ. ಆದರೆ ಬಿಬಿಎಂಪಿಯ ವಾರ್ ರೂಂಗೆ ಮಾಹಿತಿ ನೀಡಿಲ್ಲ. ಇದರಿಂದ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ಅಂತಹ ಖಾಸಗಿ ಲ್ಯಾಬ್ ಗಳಿಗೆ ಎಚ್ಚರಿಕೆ ನೀಡಿದ್ದೇವೆ. ಅವರು ಮೊದಲು ಬಿಬಿಎಂಪಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಬೆಡ್ ವ್ಯವಸ್ಥೆಯನ್ನು ಪಬ್ಲಿಕ್ ಡೊಮೈನ್ಗೆ ಹಾಕುತ್ತೇವೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇವೆ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಟೆಸ್ಟ್ ರಿಪೋರ್ಟ್ ವಿಳಂಬ ಹಿನ್ನೆಲೆ ಖಾಸಗಿ ಲ್ಯಾಬ್ ಗೆ ತಕ್ಷಣ ಬಿಬಿಎಂಪಿಯ ಡೆಟಾ ಆಪರೇಟರ್ನ್ನು ಕಳುಹಿಸುತ್ತೇವೆ. ಪಾಸಿಟಿವ್ ಬಂದ ಸೋಂಕಿತರ ಕುಟುಂಬಸ್ಥರಿಗೆ ತಕ್ಷಣವೇ ಜಿಂಕ್ ಟ್ಯಾಬ್ಲೆಟ್ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.