ಕರ್ನಾಟಕ

karnataka

ETV Bharat / state

ವರ್ಚುಯಲ್ ಕೋರ್ಟ್ ಉದ್ಘಾಟನೆ : ರಾಜ್ಯದ ಕೋರ್ಟ್​ಗಳಲ್ಲಿನ್ನು ಇ-ಫೈಲಿಂಗ್ ವ್ಯವಹರಣೆ - Act of Courts

ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾಗಿರುವ ಬೆಂಗಳೂರಲ್ಲಿ ವರ್ಚುಯಲ್ ಕೋರ್ಟ್ ಆರಂಭಿಸುತ್ತಿರುವ ಗಮನಾರ್ಹ. ವರ್ಚುಯಲ್ ಕೋರ್ಟ್​ಗಳ ಕಾರ್ಯಾರಂಭದಿಂದ ನ್ಯಾಯಾಂಗ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ನ್ಯಾಯಾಂಗದಲ್ಲಿ ಮತ್ತಷ್ಟು ಪಾರದರ್ಶಕತೆ ತರಲಿದೆ. ಇದೀಗ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ದೇಶದ ಯುವ ಮತ್ತು ಹಿರಿಯ ವಕೀಲರಿಗೆ ಇ-ಕೋರ್ಟ್ ಕುರಿತು ತರಬೇತಿ ನೀಡಬೇಕಿದೆ.

Inauguration of Virtual Court
ವರ್ಚುಯಲ್ ಕೋರ್ಟ್ ಉದ್ಘಾಟನೆ

By

Published : Aug 6, 2020, 10:09 PM IST

ಬೆಂಗಳೂರು :ನ್ಯಾಯಾಲಯಗಳ ಕಾರ್ಯ ಕಲಾಪಗಳನ್ನು ಆನ್​ಲೈನ್​ಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್ ಅಧಿಕೃತಗೊಳಿಸಿರುವ ವರ್ಚುಯಲ್ ಕೋರ್ಟ್ ವ್ಯವಸ್ಥೆಯನ್ನು ಇಂದು ಸಂಜೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಉದ್ಘಾಟಿಸಿದರು.

ವರ್ಚುಯಲ್ ಕೋರ್ಟ್ ಫಾರ್ ಟ್ರಾಫಿಕ್ ಚಲನ್ ಅಂಡ್ ಇ ಫೈಲಿಂಗ್ ಸಿಸ್ಟಮ್ ಕಾರ್ಯಕ್ರಮಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪಾಲ್ಗೊಂಡ ನ್ಯಾ, ಡಿ.ವೈ ಚಂದ್ರಚೂಡ್ ಇ-ಕೋರ್ಟ್​ನ ಲಿಂಕ್ ಒತ್ತುವ ಮೂಲಕ ವರ್ಚುಯಲ್ ಕೋರ್ಟ್ ವ್ಯವಸ್ಥೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಲು ಇ-ಕೋರ್ಟ್ ಕಾರ್ಯಾರಂಭಿಸುವುದು ಅತ್ಯಂತ ನಿರ್ಣಾಯಕ. ಮಾಹಿತಿ ತಂತ್ರಜ್ಞಾನಕ್ಕೆ ಹೆಸರಾಗಿರುವ ಬೆಂಗಳೂರಲ್ಲಿ ವರ್ಚುಯಲ್ ಕೋರ್ಟ್ ಆರಂಭಿಸುತ್ತಿರುವ ಗಮನಾರ್ಹ. ವರ್ಚುಯಲ್ ಕೋರ್ಟ್​ಗಳ ಕಾರ್ಯಾರಂಭದಿಂದ ನ್ಯಾಯಾಂಗ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ನ್ಯಾಯಾಂಗದಲ್ಲಿ ಮತ್ತಷ್ಟು ಪಾರದರ್ಶಕತೆ ತರಲಿದೆ. ಇದೀಗ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ದೇಶದ ಯುವ ಮತ್ತು ಹಿರಿಯ ವಕೀಲರಿಗೆ ಇ-ಕೋರ್ಟ್ ಕುರಿತು ತರಬೇತಿ ನೀಡಬೇಕಿದೆ ಎಂದರು. ಹಾಗೆಯೇ ದೇಶದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗೆ ಮತ್ತು ಶೀಘ್ರ ನ್ಯಾಯದಾನಕ್ಕೆ ಇ-ಕೋರ್ಟ್​ಗಳು ಹೆಚ್ಚು ಸಹಕಾರಿಯಾಗಲಿವೆ ಎಂದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮತ್ತು ಭವಿಷ್ಯದಲ್ಲಿ ಶೀಘ್ರ ನ್ಯಾಯ ವಿತರಣೆಗೆ ಕೋರ್ಟ್ ವ್ಯವಹರಣೆಯಲ್ಲಿ ಕಂಪ್ಯೂಟರೀಕರಣದ ಅಗತ್ಯವಿದೆ. ಈ ಕಾರ್ಯವನ್ನು ತ್ವರಿತವಾಗಿ ಜಾರಿಗೊಳಿಸಿದ ಹೈಕೋರ್ಟ್ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಶಿವಶಂಕರೇಗೌಡ ಮತ್ತು ತಂಡದ ಶ್ರಮ ಶ್ಲಾಘನೀಯ ಎಂದರು.

ಸುಪ್ರೀಂಕೋರ್ಟ್ ನ್ಯಾ. ಅಬ್ದುಲ್ ನಜೀರ್ ಮಾತನಾಡಿ ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಹೈಕೋರ್ಟ್ ಕೈಗೊಂಡಿರುವ ಈ ನಿರ್ಧಾರ ಅತ್ಯಂತ ಸಮಂಜಸವಾಗಿದೆ. ಪ್ರಕರಣಗಳನ್ನು ಮುಂದೂಡುವುದು ಅನಿವಾರ್ಯ ಆಗಿರುವ ಈ ಪರಿಸ್ಥಿತಿಯಲ್ಲಿ ವರ್ಚುಯಲ್ ಕೋರ್ಟ್ ವ್ಯವಸ್ಥೆ ಜಾರಿಗೊಳಿಸುವುದು ಅತ್ಯುತ್ತಮ ಬೆಳವಣಿಗೆಯಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ಕೂಡ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಿದೆ ಎಂದರು.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಮಾತನಾಡಿ, ಬೆಂಗಳೂರು ನಗರ 1.5 ಕೋಟಿ ಜನಸಂಖ್ಯೆ ಹೊಂದಿದೆ. 19 ಲಕ್ಷ ಕಾರುಗ,ಳು 2 ಲಕ್ಷಕ್ಕೂ ಅಧಿಕ ದ್ವಿಚಕ್ರ ವಾಹನಗಳು ಪ್ರತಿ ದಿನ 9 ಸಾವಿರ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಈ ಪ್ರಕರಣಗಳಲ್ಲಿ ದಂಡ ಕಟ್ಟಲು ಕೋರ್ಟ್​ಗೆ ಖುದ್ದಾಗಿ ಬರಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ನಿಯಮ ಉಲ್ಲಂಘಿಸಿದವರು ವರ್ಚುಯಲ್ ಕೋರ್ಟ್ ಮೂಲಕ ಲಾಗಿನ್ ಆಗಿ ಯಾವುದೇ ಸಮಯದಲ್ಲಿ ದಂಡ ಪಾವತಿಸಬಹುದಾಗಿದೆ. ಇದರಿಂದ ಕೋರ್ಟ್​ನ ಅಮೂಲ್ಯ ಸಮಯದೊಂದಿಗೆ ಚಾಲಕರು ಸಮಯವೂ ಉಳಿಯಲಿದೆ. ವರ್ಚುಲಯ್ ಕೋರ್ಟ್​ಗಳಿಂದ ಕ್ರಿಮಿನಲ್ ಪ್ರಕರಣಗಳ ನಿರ್ವಹಣೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಹಾಗೆಯೇ ಫಿಸಿಕಲ್ ಕೋರ್ಟ್​ನಲ್ಲಿ ಪೇಪರ್ ಮೂಲಕ ಸಲ್ಲಿಸುವ ಪ್ರಕ್ರಿಯೆ ಹೆಚ್ಚು ತ್ರಾಸದಾಯಕವಾಗಿರುತ್ತದೆ. ಅಲ್ಲದೇ ನೇರವಾಗಿ ತೆರಳಿ ದಾಖಲಿಸಬೇಕಾಗುತ್ತದೆ. ಆದರೆ, ವರ್ಚುಯಲ್ ಕೋರ್ಟ್​ಗಳ ಅನುಕೂಲ ಬಳಸಿಕೊಂಡು ಯಾವುದೇ ಮೂಲೆಯಿಂದಲೂ ಪ್ರಕರಣ ದಾಖಲಿಸಬಹುದಾಗಿದೆ. ಆನ್​ಲೈನ್ ಮೂಲಕವೇ ಶುಲ್ಕ ಪಾವತಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಕಲಾಪಗಳು ಪೇಪರ್ ಲೆಸ್ ಆಗಲಿದೆ ಎಂದರು.

ವರ್ಚುಯಲ್ ಕೋರ್ಟ್ ಉದ್ಘಾಟನೆ

ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾತನಾಡಿ, ಸಾಕಷ್ಟು ಮುಂದುವರಿದಿರುವ ಬೆಂಗಳೂರು ನಗರದಲ್ಲಿ 94 ಲಕ್ಷಕ್ಕೂ ಅಧಿಕ ವಾಹನಗಳಿವೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವರ ಸಂಖ್ಯೆಯೂ ಹೆಚ್ಚಿದೆ. ಪ್ರತಿ ದಿನವೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ನೂರಾರು ಜನರನ್ನು ಕೋರ್ಟ್ ಗೆ ಕರೆತರಬೇಕಿದೆ. ಇವರಷ್ಟೇ ಅಲ್ಲದೇ ಕ್ರಿಮಿನಲ್ ಪ್ರಕರಣಗಳ ಕುಖ್ಯಾತ ಆರೋಪಿಗಳನ್ನು ಕೋರ್ಟ್​ಗೆ ಕರೆ ತರುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿಯೇ ಅಬ್ದುಲ್ ಕರೀಂ ತೆಲಗಿಯಂತರ ಆರೋಪಿಗಳನ್ನು ವಿಡಿಯೋ ಕಾನ್ಪರೆನ್ಸ್ ಮೂಲಕವೇ ಹಾಜರುಪಡಿಸಲಾಗುತ್ತಿತ್ತು. ಆದ್ದರಿಂದ ಈ ವ್ಯವಸ್ಥೆ ಹೆಚ್ಚು ಅನುಕೂಲಕರವಾಗಿದ್ದು, ಪೊಲೀಸರು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ, ಅರವಿಂದ್ ಕುಮಾರ್, ಅಲೋಕ್ ಆರಾಧೆ, ಸುಜಾತ, ಜಿ ನರೇಂದರ್, ಜಾನ್ ಮೈಕಲ್ ಕುನ್ಹ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ ಅನಿಲ್ ಕುಮಾರ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ABOUT THE AUTHOR

...view details