ಬೆಂಗಳೂರು:ದೆಹಲಿಯಲ್ಲಿ 'ಟೆಂಪಲ್ ಆಫ್ ಡೆಮಾಕ್ರಸಿ'ಯನ್ನು ಸಾವರ್ಕರ್ ಅವರ ಜನ್ಮದಿನದಂದು ಲೋಕಾರ್ಪಣೆಗೊಳ್ಳುತ್ತಿದೆ. ಅವರ ಉತ್ಕಟ ದೇಶಪ್ರೇಮದ ಪ್ರತೀಕವಾಗಿ ಅಂದು ದೇಶದ ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ. ಅವರನ್ನು ಸರ್ವಾಧಿಕಾರಿ ಎಂದು ಜರಿದವರಿಗೆ ತಕ್ಕ ಉತ್ತರ ಕೊಡಲು ಕೇಂದ್ರದಲ್ಲಿ ತಕ್ಕ ವ್ಯಕ್ತಿಗಳು ಕುಳಿತಿದ್ದಾರೆ ಎಂದು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಪ್ರತಿಪಾದಿಸಿದರು.
ಸಾವರ್ಕರ್ ಸಾಹಿತ್ಯ ಸಂಘ ಹಾಗೂ ದಿ ಮಿಥಿಕ್ ಸೊಸೈಟಿ ವತಿಯಿಂದ ಸಾವರ್ಕರ್ ಸಮಗ್ರ ಸಂಪುಟ 6 - ಭಾರತೀಯ ಇತಿಹಾಸದ ಆರು ಚಿನ್ನದ ಯುಗಗಳು ಪುಸ್ತಕ ಲೋಕಾರ್ಪಣೆ ಸಮಾರಂಭ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಬಿ. ಎಲ್. ಸಂತೋಷ್ ಸಾವರ್ಕರ್ ಎಂದೂ ಸತ್ಯವನ್ನು ಮುಚ್ಚಿಡಲಿಲ್ಲ. ಅದರೆ ಅವರ ತತ್ವಗಳನ್ನು ಮುಚ್ಚಿಡುವ ಪ್ರಯತ್ನ ನಡೆಯಿತು ಎಂದರು.
ಶಿವಾಜಿ, ಸಾವರ್ಕರ್, ನೇತಾಜಿಯನ್ನು ಒಂದು ಚಿಂತನೆಯ ಕಡೆ ನೂಕುವ, ಪರದೆ ಹಾಕುವ ಕೆಲಸ ಮಾಡಲಾಯಿತು. ಆದರೆ ಇವರ ವಿಚಾರಗಳ ಪ್ರವಾಹವನ್ನು ಎಂದೂ ಶಾಶ್ವತವಾಗಿ ತಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂದು ಇಬ್ಬರೂ ಮಹನಿಯರು ಎಲ್ಲರಿಗೂ ಅರ್ಥವಾಗುತ್ತಿದ್ದಾರೆ. ಅವರ ಚಿಂತನೆಗಳನ್ನು ಬಹುತೇಕ ಮಂದಿ ಅಳವಡಿಸಿಕೊಳ್ಳಲಾಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದ್ರು.
ಜಗತ್ತಿಗೆ ಮೋಸ ಮಾಡಿದವರು ಬ್ರಿಟಿಷರು, ಅದನ್ನು ಇಲ್ಲೂ ಮಾಡಲು ಪ್ರಯತ್ನಿಸಿದರು. ಅಪಾತ್ರರಿಗೆ ಸರ್ಕಾರದ ಪ್ರಯತ್ನದಿಂದ ಮೂರೂ ಮಹಾನ್ ವ್ಯಕ್ತಿಗಳಾದ ಸಾವರ್ಕರ್, ನೇತಾಜಿ ಮತ್ತು ಸರ್ದಾರ್ ಪಟೇಲ್ರನ್ನು ಯಶಸ್ವಿಯಾಗಿ ಮರೆ ಮಾಚಲು ಬ್ರಿಟಿಷರ ಬಂಟರು ಪ್ರಯತ್ನಿಸಿದರು. ನೆಹರೂ ಕೆಲವೇ ತಿಂಗಳುಗಳು ಜೈಲಿನಲ್ಲಿ ಇದ್ದರೂ ದೊಡ್ಡದಾಗಿ ಬಿಂಬಿಸಲಾಯಿತು ಎಂದು ಬಿ ಎಲ್ ಸಂತೋಷ್ ಬೇಸರ ವ್ಯಕ್ತಪಡಿಸಿದರು.
ಒಳ್ಳೆಯ ನಾಳೆಗಳ ಕಡೆ ಸಾಗುತ್ತಿದ್ದೇವೆ:ಸಾವರ್ಕರ್ ಅವರನ್ನು ನೇಣು ಬಿಗಿಯುವ ಜಾಗದ ನೇರ ಮೇಲಿನ ಕೊಠಡಿಯಲ್ಲಿ ಚೀತ್ಕಾರ ಕೇಳುವ ರೀತಿಯಲ್ಲಿ ಬೇಕೆಂದು ಇಡಲಾಗಿತ್ತು. ಆದರೆ ಸಮಚಿತ್ತ, ದೇಶದ ಬಗೆಗಿನ ಉತ್ಕಟ ಪ್ರೇಮವನ್ನು ಸ್ವಲ್ಪವೂ ಅಲುಗಾಡಿಸಲು ಆಗಲಿಲ್ಲ. ಯಾರಿಗೋ ಬೇಸರವಾಗುತ್ತದೆ ಎಂದು ಇತಿಹಾಸದಲ್ಲಿ ಇದನ್ನು ಮರೆಮಾಚಲಾಯಿತು. ಆದರೆ ಈಗ ವೈಚಾರಿಕವಾಗಿ ದೇಶ ಮುಂದುವರೆಯುತ್ತಿದ್ದು, ಒಳ್ಳೆಯ ನಾಳೆಗಳ ಕಡೆ ಸಾಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೀರ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿ, ಸಾವರ್ಕರ್ ಯಾವಾಗಲೂ ವಿವಾದಾತ್ಮಕ ವ್ಯಕ್ತಿಯಾಗಿ ಉಳಿದಿದ್ದರು. ಕಾರಣ ಅವರ ರಾಷ್ಟ್ರೀಯವಾದ ಮತ್ತು ಹಿಂದುತ್ವ ಸಿದ್ಧಾಂತ. ಅವರು ತೀರಿಕೊಂಡ 57 ವರ್ಷಗಳ ನಂತರ ಅವರನ್ನು ಗುರುತಿಸಲಾಗುತ್ತಿದೆ. ಆದರೆ ಇಷ್ಟು ವರ್ಷಗಳ ನಂತರ ನಾವು ಹಿಂದೂಗಳೆಂದು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಇಂದಿಗೂ ಸಹ ನಾವು ಅಸುರಕ್ಷಿತ ಭಾವನೆ ಹೊಂದಿದ್ದೇವೆ ಎಂದು ಹೇಳಿದ್ರು.
ಲೋಕಮಾನ್ಯ ತಿಲಕ್ ಮತ್ತು ಸಾವರ್ಕರ್ ಸಿಂಧೂ ನದಿಯಿಂದಲೇ ನಮ್ಮ ಸಂಸ್ಕೃತಿ ಪ್ರಾರಂಭ, ಇದು ನಮ್ಮ ಪಿತೃಭೂಮಿ ಮತ್ತು ಪುಣ್ಯ ಭೂಮಿ ಎಂದು ಹೇಳಿದ್ದಾರೆ. ಈ ನೆಲದಲ್ಲಿ ನಾಸ್ತಿಕರಾಗಿರುವವರನ್ನು ಹಿಂದೂ ಎಂದು ಕರೆಯಲಾಗುತ್ತದೆ. ಅನೇಕ ನ್ಯಾಯಾಲಯದ ತೀರ್ಪು ಕೂಡ ಇದನ್ನು ಪುನರುಚ್ಚರಿಸಿದೆ. ಸ್ವಾತಂತ್ರ್ಯಕ್ಕೂ ಮೊದಲು ಮುಸ್ಲಿಂ ಲೀಗ್ ಶೇ. 40ರಷ್ಟು ಪ್ರಾತಿನಿಧ್ಯವನ್ನು ಒತ್ತಾಯಿಸುತ್ತಿತ್ತು ಮತ್ತು ಕಾಂಗ್ರೆಸ್ ಅದನ್ನು ತಕ್ಷಣವೇ ಒಪ್ಪಿಕೊಂಡಿತ್ತು.