ಬೆಂಗಳೂರು: ನಗರದ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಮೇಕ್ ಇನ್ ಇಂಡಿಯಾ ಲಾಂಛನದ ಕಲಾಕೃತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಿದರು.
ನಗರದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಮೇಕ್ ಇನ್ ಇಂಡಿಯಾದ ಸಿಂಹದ ಲಾಂಛನವನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ನೀರಿನ ಚಿಲುಮೆ, ವಿದ್ಯುತ್ ದೀಪಗಳ ಮೂಲಕ ನಗರಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವೂ ಇದಾಗಿದೆ.
ಮೇಕ್ ಇನ್ ಇಂಡಿಯಾ ಲಾಂಛನ ಕಲಾಕೃತಿ ಉದ್ಘಾಟ ಈ ವೇಳೆ ಮಾತನಾಡಿದ ಸಿಎಂ, ಮೇಕ್ ಇನ್ ಇಂಡಿಯಾದ ಕಲಾಕೃತಿಯನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ. ಕರ್ನಾಟಕ ಹೂಡಿಕೆಗೆ ನೆಚ್ಚಿನ ತಾಣವಾಗಿದೆ ಎಂದರು. ಸಮೀಕ್ಷೆ ಪ್ರಕಾರ, ವಿಶ್ವದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ನೆಲೆ ಎಂದು ಖ್ಯಾತಿ ಪಡೆದಿದೆ. ಪ್ರಧಾನಿ ಮೋದಿಯವರ ಮೆಕ್ ಇನ್ ಇಂಡಿಯಾ ಪರಿಕಲ್ಪನೆಯ ಅನಾವರಣಗೊಳಿಸುವ ಈ ಲಾಂಛನ ಉದ್ಘಾಟನೆ ಮಾಡಿರುವುದು ಸಂತೋಷಕರ ವಿಷಯ. ನಗರ ಹೂಡಿಕೆ ಸ್ನೇಹಿಯಾಗಿದೆ. ಕೈಗಾರಿಕಾ ಜಿಡಿಪಿ ಶೇಕಡ 20ಕ್ಕೆ ಹೆಚ್ಚಿಸಲು ಕ್ರಮ ವಹಿಸಿದ್ದು, ಇದರ ಬಹುಪಾಲು ಕೊಡುಗೆ ಬೆಂಗಳೂರಿನದ್ದೇ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಹಲವು ಕ್ಷೇತ್ರಗಳ ಕಂಪನಿಗಳ ನೆಲೆಯಾಗಿದೆ. ನಗರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು, ಸುಗಮ ಸಂಚಾರ ಸೌಲಭ್ಯ, ಸಾರ್ವಜನಿಕ ಸಂಚಾರ ಬಳಕೆಗೆ ಒತ್ತು ಹಾಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗುವುದು. ಬೆಂಗಳೂರನ್ನು ವಿಶ್ವಮಾನ್ಯ ನಗರ ಮಾಡುವುದಕ್ಕೆ ಒತ್ತು ನೀಡಲಾಗುವುದು. ಅದಕ್ಕಾಗಿ ಮಿಷನ್ 2022 ಕೈಗೊಳ್ಳಲಾಗಿದೆ. ಬೆಂಗಳೂರು ಎಲ್ಲಾ ವಯೋಮಾನದವರ ನೆಚ್ಚಿನ ತಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ:ಸಿಎಂ ಯಡಿಯೂರಪ್ಪ ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ
ಬಳಿಕ ಸಿಎಂ ತಮ್ಮ ಹುಟ್ಟುಹಬ್ಬದ ಆಚರಣೆ ಬಗ್ಗೆ ಮಾತನಾಡಿ, ನನ್ನ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ, ಪ್ರಧಾನಿ ಮೋದಿ, ದೇವೇಗೌಡರು ಕರೆ ಮಾಡಿ ಶುಭ ಕೋರಿದ್ರು. ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಎಲ್ಲರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. 8 ನೇ ತಾರೀಖಿನಂದು ಉತ್ತಮ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಸಚಿವ ಬಸವರಾಜ್ ಬೊಮ್ಮಾಯಿ,ಆರ್ ಅಶೋಕ್, ಡಿಸಿಎಂ ಅಶ್ವತ್ಥ ನಾರಾಯಣ ಮತ್ತಿತರರು ಭಾಗಿಯಾಗಿದ್ದರು.