ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಪೂರ್ಣ ಸಿದ್ಧತೆ ಆಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಮಂದಿ ವೀಕ್ಷಿಸುವ ಐತಿಹಾಸಿಕ ಸಮಾರಂಭ ಇದಾಗಿದ್ದು ಬೆಳಗ್ಗೆ 10.30ಕ್ಕೆ ಆರಂಭವಾಗಲಿದೆ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅಧಿಕೃತವಾಗಿ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗ ಇರುವ ಪಕ್ಷದ ಹೊಸ ಕಟ್ಟಡದಲ್ಲಿ ಸಮಾರಂಭ ನಡೆಯಲಿದೆ. ಇಲ್ಲಿ ಆಹ್ವಾನಿತ 150 ಮಂದಿಗೆ ಮಾತ್ರ ಕೂರಲು ಅವಕಾಶ ಇರಲಿದೆ. ಉಳಿದಂತೆ ಪಕ್ಷದ ಹಳೆಯ ಕಚೇರಿ ಒಳಭಾಗ ಹಾಗೂ ಮುಂಭಾಗದಲ್ಲಿ ಡಿಜಿಟಲ್ ಡಿಸ್ಪ್ಲೇ ಅಳವಡಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 7800 ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ 10ರಿಂದ 15 ಲಕ್ಷ ಮಂದಿ ಈ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.
ಈ ಸಮಾರಂಭದ ಮೂಲಕ ರಾಜ್ಯ ಕಾಂಗ್ರೆಸ್ ಬಲಿಷ್ಠಗೊಳಿಸುವ ಜೊತೆಗೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಿದ್ದೇವೆ. ಜನತೆಯ ಮುಂದೆ ಸತ್ಯ ಬಿಚ್ಚಿಡಲಿದ್ದೇವೆ ಎಂದು ವಿವರಿಸಿದರು.
ಕೊರೊನಾ ಆರಂಭದಲ್ಲಿ 564 ಪ್ರಕರಣಗಳು ಇತ್ತು. ಈಗ 5 ಲಕ್ಷದ ಗಡಿ ದಾಟಿದೆ. ಜಗತ್ತಿನಲ್ಲಿ 10ರಿಂದ 11ನೇ ಸ್ಥಾನದಲ್ಲಿದ್ದ ಭಾರತ ಈಗ ನಾಲ್ಕನೇ ಸ್ಥಾನ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಮೂರು ಇಲ್ಲವೇ ಎರಡನೇ ಸ್ಥಾನಕ್ಕೆ ತಲುಪಲಿದೆ. ಸರ್ಕಾರಗಳು ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಿದ್ದ ಪ್ಯಾಕೇಜ್ಗಳು ಎಲ್ಲಿ ತಲುಪಿವೆ ಎಂಬುದನ್ನು ತಿಳಿಸಿ ಎಂದು ಸವಾಲು ಹಾಕಿದರು.
ಬಳ್ಳಾರಿಯಲ್ಲಿ ಕೊರೊನಾ ಮಹಾಮಾರಿಯಿಂದ ಮೃತಪಟ್ಟ ಮೂವರ ಅಂತ್ಯ ಸಂಸ್ಕಾರ ಒಂದೇ ಗುಣಿಯಲ್ಲಿ ನಡೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಗ್ರಪ್ಪ, ಜನರನ್ನು ಕಾಪಾಡುವ ಕಾರ್ಯವನ್ನು ಈ ಸರ್ಕಾರ ಮಾಡಿಲ್ಲ. ಕನಿಷ್ಠ ಅಂತಿಮ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸುವ ಅವಕಾಶ ಕೊಡಬೇಕಿತ್ತು. ರಾಜ್ಯದ ಹಲವು ಕಡೆ ರೋಗಿಗಳ ಶವವನ್ನು ಅಮಾನವೀಯವಾಗಿ ಹೂಳುವ ಕಾರ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷ ಈ ನಿಟ್ಟಿನಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು.