ಬೆಂಗಳೂರು: ರಾಜ್ಯದ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ "ರೈತರೊಂದಿಗೊಂದು ದಿನ" ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನವೆಂಬರ್ 14ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಹುಟ್ಟುಹಬ್ಬದ ಅಂಗವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಕಳೆದ ಏಪ್ರಿಲ್ 1ರಿಂದಲೇ ರೈತ ವಾಸ್ತವ್ಯ ಮಾಡಬೇಕೆಂದಿದ್ದೆ. ಆದರೆ ಕೋವಿಡ್ನಿಂದಾಗಿ ಸಾಧ್ಯವಾಗಲಿಲ್ಲ. ಈಗ ರೈತರೊಂದಿಗೊಂದು ದಿನ ಎಂಬ ವಿನೂತನ ಕಾರ್ಯಕ್ರಮವನ್ನು ನ. 14ರಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಿಂದ ಆರಂಭಿಸುತ್ತಿದ್ದೇನೆ. ರೈತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಗ್ರ ಕೃಷಿ, ಕೃಷಿ ರೈತೋದ್ಯಮ ಕುರಿತು ಉತ್ಪಾದನಾ ವೆಚ್ಚ ಕುರಿತು ಮಾಹಿತಿ ನೀಡಿ ಹುರಿದುಂಬಿಸುವುದು ಹಾಗೂ ರೈತರ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಮೂಲದಿಂದ ಅರಿಯಲು ಕೋಲಾರ ಕೃಷಿ ಮಾದರಿಯಾಗುವಂತೆ ಮನೋಸ್ಥೈರ್ಯ ತುಂಬುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾದರಿ ರೈತರ ಭೇಟಿ ಅವರ ಅನುಭವ ಬೇರೆಯವರಿಗೆ ಮಾದರಿಯಾಗುವಂತೆ ಮಾಡುವುದು. ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕುಗಳ ರೈತ ಮುಖಂಡರು ಪ್ರಗತಿಪರರು ಕೃಷಿ ಅಧಿಕಾರಿಗಳು ಕೂಡ ಭಾಗಾವಹಿಸಲಿದ್ದಾರೆ. ಪ್ರತಿ ತಿಂಗಳು 2ರಿಂದ 3 ಜಿಲ್ಲೆಗಳಲ್ಲಿ ಕಾರ್ಯಕ್ರಮ ಮಾಡಿ ಬೆಳಗ್ಗೆ 7ರಿಂದ ರೈತರೊಂದಿಗೆ ಇರುವ ಕಾರ್ಯಕ್ರಮ ಇದಾಗಿದೆ. ಹೀಗೆ ಎಲ್ಲಾ ಜಿಲ್ಲೆಗಳ ರೈತರಿಂದ ಮಾಹಿತಿ ಪಡೆದ ನಂತರ ಸಮಗ್ರ ವರದಿಯನ್ನು ಮುಖ್ಯಮಂತ್ರಿಗೆ ನೀಡಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡುವ ಉದ್ದೇಶ ಇದಾಗಿದೆ ಎಂದರು.
ರೈತರ ತಾತ್ಕಾಲಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಿಂತ ಶಾಶ್ವತ ಪರಿಹಾರ ನೀಡಬೇಕು. ಎಲ್ಲಾ ಜಿಲ್ಲೆಗಳನ್ನು ಈಗ ಮತ್ತೆ ಸುತ್ತಿ ರೈತರ ಸಮಸ್ಯೆಯನ್ನು ಅರಿಯಲು ಅಧ್ಯಯನ ಈಗ ಮತ್ತೊಂದು ಪ್ರಯತ್ನವಾಗಿದೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಕೂಡ ಎಲ್ಲಾ ಜಿಲ್ಲೆಗಳನ್ನು ಸುತ್ತಿ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಯಿತು ಎಂದರು.